ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸ್ತಕ್ಷೇಪ ಮಾಡುತ್ತಿರುವುದನ್ನು ಹೈಕೋರ್ಟ್ ಗಂಭೀರವಾಗಿ ಪ್ರಶ್ನಿಸಿದೆ. ಬೆಸ್ಕಾಂ ಎಇ ಎಸ್. ಚೇತನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರಿದ್ದ ಹೈಕೋರ್ಟ್ ಪೀಠ, ವರ್ಗಾವಣೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿಗಳ ನೇರ ಹಸ್ತಕ್ಷೇಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ನೌಕರರ ವರ್ಗಾವಣೆ ವಿಚಾರವನ್ನು ಸಂಬಂಧಿಸಿದ ಇಲಾಖೆಗಳೇ ನಿರ್ವಹಿಸಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮುಖ್ಯಮಂತ್ರಿಗಳ ಕಚೇರಿ ಇಂತಹ ಮನವಿಗಳನ್ನು ಸ್ವೀಕರಿಸುವುದು ಸರಿಯಲ್ಲ ಎಂದು ಅವರು ಹೇಳಿದರು. ಮುಖ್ಯಮಂತ್ರಿಗಳಿಗೆ ಇನ್ನಷ್ಟು ಮಹತ್ವದ ಕೆಲಸಗಳಿದ್ದು, ಇಂತಹ ವಿಷಯಗಳಿಗೆ ಸಮಯ ವ್ಯಯಿಸಬಾರದು ಎಂದು ಸೂಚಿಸಲಾಗಿದೆ.
ಈ ಸಂಬಂಧ ಹೈಕೋರ್ಟ್ ತನ್ನ ಆದೇಶದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಲು ಸೂಚನೆ ನೀಡಿದೆ. ಪ್ರಕರಣ ಸಂಬಂಧ ಸಿಎಂ ನೀಡುವ ವರ್ಗಾವಣೆ ಶಿಫಾರಸುಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದಲೂ ನಿಲುವು ಕೇಳಲಾಗಿತ್ತು. ಮುಖ್ಯ ಕಾರ್ಯದರ್ಶಿ, ಸಿಎಂ ಕಚೇರಿಯಿಂದ ನೀಡುವ ಟಿಪ್ಪಣಿಗಳು ಕೇವಲ ಶಿಫಾರಸುಗಳಾಗಿದ್ದು, ಅಂತಿಮ ಆದೇಶವನ್ನು ಸಂಬಂಧಪಟ್ಟ ಇಲಾಖೆ ನೀಡುತ್ತದೆ ಎಂದು ಸ್ಪಷ್ಟಪಡಿಸಿದರು.
ಇಂಧನ ಇಲಾಖೆಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿಯೂ ಸಿಎಂ ಕಚೇರಿ ಪಾತ್ರ ವಹಿಸಿದ್ದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆದಿವೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಲಾಖೆಗಳ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಹೈಕೋರ್ಟ್ ನೀಡಿದ ಈ ತೀಕ್ಷ್ಣ ಸೂಚನೆ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
