
Sri Muruga Math Shivamurthy Muruga Sharan
ಬೆಂಗಳೂರು:
ಶ್ರೀ ಮುರುಗಾ ಮಠ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನಗರದ ಹೈಕೋರ್ಟ್ ಪೀಠವು ತೀರ್ಪು ಕಾಯ್ದಿರಿಸಿದೆ. ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಧಾರವಾಡ ಪೀಠ ತೀರ್ಪು ಕಾಯ್ದಿರಿಸಿತು.
ಮಂಗಳವಾರ ನಡೆದ ವಿಚಾರಣೆ ವೇಳೆ ದೂರು ಸಲ್ಲಿಸಲು ಸಂತ್ರಸ್ತರಿಗೆ ನೆರವಾಗಿದ್ದ ಒಡನಾಡಿ ಸೇವಾ ಸಂಸ್ಥೆಯ ಪರವಾಗಿ ವಕೀಲ ಡಿ.ಸಿ. ಶ್ರೀನಿವಾಸ್, ಆರೋಪಿ ಶರಣರು ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಅವರಿಗೆ ಜಾಮೀನು ನೀಡಿದರೆ ಪ್ರಕರಣದಲ್ಲಿನ ಸಂತ್ರಸ್ತರಾದ ಬಡ ಮಕ್ಕಳಿಗೆ ಬೆದರಿಕೆ ಎದುರಾಗುವ ಸಾಧ್ಯತೆ ಇದೆ. ಶರಣರು ತಮ್ಮನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂಬುದಾಗಿ ಸಂತ್ರಸ್ತರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸ್ವಯಂಕೃತ ಹೇಳಿಕೆ ದಾಖಲಿಸಿದ್ದಾರೆ. ಈ ಅಂಶವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಶರಣರಿಗೆ ಜಾಮೀನು ನೀಡಬಾರದು ಎಂದು ನ್ಯಾಯಪೀಠವನ್ನು ಕೋರಿದರು.
ಈ ಹಿಂದೆ ನಡೆದಿದ್ದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರು, ಶಿವಮೂರ್ತಿ ಶರಣರು ತಮ್ಮ ಮಠದಲ್ಲಿನ ಹಾಸ್ಟೆಲ್‌ನ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಶೋಷಿಸಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ. ಇದರಿಂದ ಅವರಿಗೆ ಜಾಮೀನು ನೀಡಬಾರದು ಎಂದು ಹೈಕೋರ್ಟ್‌ಗೆ ಕೋರಿದ್ದರು. ಶರಣರ ಪರ ವಕೀಲರು, ಸಂತ್ರಸ್ತೆಯರ ಮೇಲೆ ಅರ್ಜಿದಾರರು ಲೈಂಗಿಕ ದೌರ್ಜನ್ಯ ನಡೆಸಿಲ್ಲ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿರುವ ಕಾರಣ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.
ಮೂರು ಪಕ್ಷಗಾರರ ವಾದವನ್ನು ಆಲಿಸಿರುವ ನ್ಯಾಯಪೀಠ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ.