ಬೆಂಗಳೂರು : ಹೊಸದಾಗಿ ನಿರ್ಮಾಣಗೊಂಡಿರುವ ಮನೆಯೊಂದಕ್ಕೆ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ಬೆಸ್ಕಾಂ ನೀಡಿದ್ದ ಸಂವಹನ ಪತ್ರಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶಿದೆ. ಅಲ್ಲದೇ ಸ್ಮಾರ್ಟ್ ಮೀಟರ್‌ಗಳ ಬೆಲೆ ನಿಗದಿಗೆ ರಾಜ್ಯ ಸರಕಾರವನ್ನು ಹೈಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆಗೆ ಒತ್ತಾಯಿಸಿ ದೊಡ್ಡಬಳ್ಳಾಪುರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಜಯಲಕ್ಷ್ಮೀ ಎಂಬವರಿಗೆ ನೀಡಿದ್ದ ಸಂವಹನ ಪತ್ರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಸರಕಾರದ ಪರ ವಕೀಲರಿಗೆ, ಇದೆಲ್ಲವೂ ಉಚಿತ ಗ್ಯಾರೆಂಟಿಗಳಿಂದ ಎದುರಾಗಿರುವರ ಸಮಸ್ಯೆಗಳೇ? ಎಂದು ಪ್ರಶ್ನಿಸಿದರು. ಉಚಿತವಾಗಿ ವಿದ್ಯುತ್ ಕೊಡಿ ಎಂದು ನಿಮ್ಮನ್ನು ಯಾರು ಕೇಳಿದ್ದರು? ಬಡವರಿಗೆ ಏಕಾಏಕಿ ಈ ರೀತಿ ಬೆಲೆ ಏರಿಕೆ ಮಾಡಿದರೆ ಎಲ್ಲಿಗೆ ಹೋಗಬೇಕು? ಎಲ್ಲರೂ ಹೆಚ್ಚು ಹಣ ಕೊಟ್ಟು ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದರೆ ಬಡವರು ಏನು ಮಾಡಬೇಕು? ಎಂದು ಪ್ರಶ್ನೆ ಮಾಡಿತು.
ತಾತ್ಕಾಲಿಕ ಸಂಪರ್ಕಕ್ಕೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದು ತಿಳಿಸಿ, ಇದೀಗ ಶಾಶ್ವತ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಅಳವಡಿಕೆ ಒತ್ತಾಯಿಸುವುದು ಕಠಿಣ ಕ್ರಮವಾಗಿದೆ. ಈ ರೀತಿಯಲ್ಲಿ ಕಡ್ಡಾಯ ಮಾಡಿದಲ್ಲಿ ಬಡವರು ಎಲ್ಲಿಗೆ ಹೋಗಬೇಕು ಎಂದು ಸರಕಾರಕ್ಕೆ ಪ್ರಶ್ನೆಗಳ ಸುರಿಮಳೆಗೈದರು.
ವಾದ ಆಲಿಸಿ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ.