
Karnataka Housing Minister Zameer Ahmed Khan | Housing Board developing Integrated Township near International Airport
ಬೆಂಗಳೂರು:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಗೃಹ ಮಂಡಳಿ ವತಿಯಿಂದ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣವಾಗಲಿದೆ. ಚಿಕ್ಕಜಾಲ -ಮೀನುಕುಂಟೆ ಗ್ರಾಮದ 95.23 ಎಕರೆ ಪೈಕಿ 65 ಎಕರೆಯಲ್ಲಿ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಒಳಗೊಂಡ ಟೌನ್ ಶಿಪ್ ತಲೆ ಎತ್ತಲಿದೆ. ವಸತಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಜಮೀನು ಮಾಲೀಕರು ಹಾಗೂ ಗೃಹ ಮಂಡಳಿ ಸಹಭಾಗಿತ್ವದಲ್ಲಿ 50:50 ಒಪ್ಪಂದ ದಡಿ ರೂಪಿಸಿರುವ ಟೌನ್ ಶಿಪ್ ಯೋಜನೆ ಜಮೀನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಗೃಹ ಮಂಡಳಿ ವತಿಯಿಂದ ಕೈಗೆತ್ತಿ ಕೊಳ್ಳುತ್ತಿರುವ ಮಹತ್ವದ ಯೋಜನೆ ಇದಾಗಿದ್ದು, 850 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಗುಣ ಮಟ್ಟದ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
95.13 ಎಕರೆ ಪೈಕಿ 43 ಎಕರೆ ಯೋಜನೆಗೆ ಕೊಡಲು ರೈತರು ಸಮ್ಮತಿ ಪತ್ರ ನೀಡಿರುವುದು ಸೇರಿ 65 ಎಕರೆ ಜಾಗ ಲಭ್ಯವಿದೆ. ಉಳಿದ ಜಮೀನು ಸಿಗುವ ವಿಶ್ವಾಸ ವಿದೆ ಎಂದು ಹೇಳಿದರು.
ಆದಷ್ಟು ಶೀಘ್ರ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಅನುಮತಿ ಪಡೆದು ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಗೃಹ ಮಂಡಳಿ ಆಯುಕ್ತರಾದ ಕವಿತಾ ಮನ್ನಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಚಿವರು, ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕೆ. ಆರ್. ಪುರಂ ವಿಧಾನ ಸಭೆ ಕ್ಷೇತ್ರದ ನಗರೇಶ್ವರ ನಾಗೇನಹಳ್ಳಿ ಬಳಿ 95 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 1047 ಮನೆಗಳ ವಸತಿ ಸಮುಚ್ಚಯವನ್ನು ಸಚಿವರು ಪರಿಶೀಲನೆ ನಡೆಸಿ ಶೀಘ್ರ ಕಾಮಗಾರಿ ಪೂರ್ಣ ಗೊಳಿಸಲು ಸೂಚನೆ ನೀಡಿದರು.
ಕೊಳೆಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.

