Home ಬೆಂಗಳೂರು ನಗರ 1 ಕೋಟಿ ಆರ್ಥಿಕ ಅವಕಾಶಗಳ ಸೃಷ್ಟಿಗೆ ʼಮಿಷನ್‌ ಯುವ ಸಮೃದ್ಧಿʼ: ಡಿಸಿಎಂ ಘೋಷಣೆ

1 ಕೋಟಿ ಆರ್ಥಿಕ ಅವಕಾಶಗಳ ಸೃಷ್ಟಿಗೆ ʼಮಿಷನ್‌ ಯುವ ಸಮೃದ್ಧಿʼ: ಡಿಸಿಎಂ ಘೋಷಣೆ

80
0

ವಿಶ್ವ ಕೌಶಲ್ಯದಿನ-2021 ಆಚರಣೆ

ಬೆಂಗಳೂರು:

ರಾಜ್ಯದಲ್ಲಿ ಕೌಶಲ್ಯತೆಗೆ ಅಗ್ರಮಾನ್ಯತೆ ನೀಡಿ ಕೌಶಲ್ಯ ಮತ್ತು ಉದ್ಯಮಶೀಲತೆ ವಲಯದಲ್ಲಿ  ಒಂದು ಕೋಟಿ ಆರ್ಥಿಕ ಅವಕಾಶಗಳನ್ನು ಸೃಷ್ಟಿ ಮಾಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಪ್ರಕಟಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರುವಾರ ಬೆಳಗ್ಗೆ ನಡೆದ ʼವಿಶ್ವ ಕೌಶಲ್ಯ ದಿನಾಚರಣೆʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಡೀ ದೇಶದಲ್ಲಿಯೇ ಇದೊಂದು ಕ್ರಾಂತಿಕಾರಕ ಉಪಕ್ರಮ. ಈಗಾಗಲೇ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು, ಶೀಘ್ರವೇ ಕಾರ್ಯಪಡೆ ಈ ಬಗ್ಗೆ ವರದಿಯನ್ನು ನೀಡಲಿದೆ” ಎಂದರು.

ಕೋವಿಡ್‌-19 ಕಾರಣದಿಂದ ರಾಜ್ಯದ ಆರ್ಥಿಕ ಅವಕಾಶ, ಉದ್ಯೋಗ ಸೇರಿದಂತೆ ಹಲವಾರು ರೀತಿಯ ಜೀವನೋಪಾಯ ಸರಪಳಿಗಳ ಮೇಲೆ ಮಾರಕ ಪರಿಣಾಮ ಬೀರಿದೆ. ಇದಕ್ಕೆ ಚೇತರಿಕೆ ನೀಡಲು ʼಮಿಷನ್‌ ಯುವ ಸಮೃದ್ಧಿʼ ಹೆಸರಿನಲ್ಲಿ ಆರ್ಥಿಕ ಅವಕಾಶ ಸೃಷ್ಟಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, 8 ಜಿಲ್ಲೆಗಳಲ್ಲಿ ಪೈಲಟ್‌ ಪ್ರಾಜೆಕ್ಟ್‌ ಆಗಿ ಜಾರಿ ಮಾಡಲು ನಿಶ್ಚಿಯಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಈ ನಿಟ್ಟಿನಲ್ಲಿ ಜುಲೈ-ಅಗಸ್ಟ್‌ ತಿಂಗಳಿನಲ್ಲಿ ʼಕೌಶಲ್ಯಮಾಸʼವನ್ನು ಆಚರಿಸಲಾಗುತ್ತಿದೆ. ಅಗಸ್ಟ್‌ 21ರಂದು ʼವಿಶ್ವ ಉದ್ಯಮಶೀಲತಾ ದಿನʼವನ್ನು ಆಚರಣೆ ಮಾಡಲಾಗುತ್ತಿದ್ದು, ಅಲ್ಲಿಯವರೆಗೂ ಕೌಶಲ್ಯಮಾಸವನ್ನು ಆಚರಿಸಲಾಗುವುದು ಎಂದು ಡಿಸಿಎಂ ಹೇಳಿದರು.

ಐಟಿಐಗಳಿಗೆ ಮರುಜನ್ಮ:

ರಾಜ್ಯದಲ್ಲಿ ಬಹು ಹಿಂದೆಯೇ ಸ್ಥಾಪನೆಯಾದ 150 ಐಟಿಐ ಸಂಸ್ಥೆಗಳು ಯಾವುದೇ ರೀತಿ ಅಭಿವೃದ್ಧಿ ಇಲ್ಲದೇ ನೆನೆಗುದಿಗೆ ಬಿದ್ದಿವೆ. ಇದೀಗ ಸರಕಾರ ಮತ್ತು ಟಾಟಾ ಟೆಕ್ನಾಲಜೀಸ್‌ ನೇತೃತದ ಖಾಸಗಿ ಸಹಭಾಗಿತ್ವದಲ್ಲಿ ಇಷ್ಟೂ ಐಟಿಐಗಳನ್ನು ಆಮೂಲಾಗ್ರವಾಗಿ ಅತ್ಯಾಧುನಿಕವಾಗಿ ಅಭಿಪಡಿಸಲಾಗುತ್ತಿದೆ. ಈ ಯೋಜನೆಗೆ ಸರ್ಕಾರ 800 ಕೋಟಿ ರೂ. ನೀಡುತ್ತಿದ್ದು, ಖಾಸಗಿ ಕ್ಷೇತ್ರವು 4,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಿದೆ ಎಂದು ಡಿಸಿಎಂ ನುಡಿದರು.

ಇನ್ನೂ 4 ಹೊಸ ಜಿಟಿಡಿಸಿ:

ರಾಜ್ಯದಲ್ಲಿ ಸದ್ಯಕ್ಕೆ 24 ಜಿಟಿಡಿಸಿಗಳಿದ್ದು, ಇನ್ನೂ ನಾಲ್ಕು ಹೊಸ ಜಿಟಿಡಿಸಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ ಎಂದ ಉಪ ಮುಖ್ಯಮಂತ್ರಿಗಳು, ಕರ್ನಾಟಕ-ಜರ್ಮನಿ ತಾಂತ್ರಿಕ ಸಂಸ್ಥೆಗಳು ರಾಜ್ಯದಲ್ಲಿ ಸದ್ಯಕ್ಕೆ 5 ಇವೆ. ಇನ್ನು ಎರಡು ಹೊಸ ಸಂಸ್ಥೆಗಳನ್ನು ಸ್ಥಾಪನೆ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಒಟ್ಟಾರೆಯಾಗಿ ಕೈಗಾರಿಕೆ ವಲಯದ ಬೇಡಿಕೆಗೆ ತಕ್ಕಂತೆ ಉದ್ಯೋಗ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಯಾವುದೇ ಕೌಶಲ್ಯ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದರೂ ಉದ್ಯೋಗ ಖಚಿತವಾಗಿ ಸಿಗುವಂತೆ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

ಈವರೆಗೆ ಎಲ್ಲರೂ ವೈಟ್‌ ಕಾಲರ್‌ ಉದ್ಯೋಗವೇ ಬೇಕೆನ್ನುತ್ತಿದ್ದರು. ಇನ್ನು ಮುಂದೆ ಬ್ಲೂ ಕಾಲರ್‌ ಉದ್ಯೋಗವೂ ಬೇಕು ಎನ್ನುವಂತೆ ಸರಕಾರ ಪರಿಣಾಮಕಾರಿಯಾಗಿ ಕಾರ್ಯಕ್ರಮ ರೂಪಿಸುತ್ತಿದೆ ಎಂದು ಅವರು ಹೇಳಿದರು.

8 ಒಪ್ಪಂದಗಳಿಗೆ ಅಂಕಿತ

ರಾಜ್ಯವ್ಯಾಪಿ ಯುವಜನರಲ್ಲಿ ಅತ್ಯುತ್ತಮ ದರ್ಜೆಯ ಕುಶಲತೆಯನ್ನು ಹೆಚ್ಚಿಸಿ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಖಾಸಗಿ ಕ್ಷೇತ್ರದ ನಡುವೆ ಎಂಟು ಒಪ್ಪಂದಗಳಿಗೆ ಇದೇ ಕಾರ್ಯಕ್ರಮದಲ್ಲಿ ಸಹಿ ಹಾಕಲಾಯಿತು. ಒಪ್ಪಂದಗಳ ವಿವರ ಹೀಗಿದೆ;

ಬೆಂಗಳೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಆಟೋಮ್ಯಾಟೀವ್‌ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿ ಕೋರ್ಸುಗಳನ್ನು ಆಯ್ದ ಐಟಿಐಗಳಲ್ಲಿ ಪ್ರಾರಂಭಿಸಲು ಟೊಯೊಟಾ ಮೋಟಾರ್ಸ್ ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೌಶಲ್ಯ ಕರ್ನಾಟಕ ಯೋಜನೆಯಲ್ಲಿ ಯುವಕರಿಗೆ ತರಬೇತಿ ನೀಡಲು ವಿಪ್ರೋ, ಜಿಇ, ನಾರಾಯಣ ಹೃದಯಾಲಯ, ಸೆನ್‌ಸೆರಾ ಟೆಕ್ನಾಲಜೀಸ್‌, ಎಲಿಸಿಯಾ (ELCIA), ಇಎಸ್‌ಡಿಎಂ, ಕ್ಲಸ್ಟರ್‌, ಆದಿತ್ಯ ಬಿರ್ಲಾ ಗ್ರೂಪ್‌, ಹೋಮ್‌ ಲೇನ್‌ ಜತೆ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು.

ಯುವಜನರಿಗೆ ಮಾಸ್ಟರ್‌ ಕ್ಯಾಮ್‌ ಡಿಸೈನ್‌ ಸಾಫ್ಟ್‌ವೇರ್‌ನಲ್ಲಿ ತರಬೇತಿ ನೀಡಲು ಕರ್ನಾಟಕ ಜರ್ಮನ್‌ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ (KGTTI)  ಹಾಗೂ ಆಟೋ ಡೆಸ್ಕ್‌ ಕಂಪನಿ ಜತೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.

ಚಿತ್ರದುರ್ಗ, ಚಳ್ಳಕೆರೆ, ಕೊಪ್ಪಳ, ಯಾದಗಿರಿಯಲ್ಲಿ ನೂತನ ನಿರ್ಮಿಸಲಾಗಿರುವ ಜಿಟಿಡಿಸಿ ಕೇಂದ್ರಗಳಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಡಿಪ್ಲೊಮೊ ಕೋರ್ಸುಗಳನ್ನು ಆರಂಭಿಸಲು ಇದೇ ಸಂದರ್ಭದಲ್ಲಿ ಎಐಸಿಟಿಇ ಯಿಂದ ಅನುಮೋದನೆ ಪಡೆಯಲಾಯಿತು.

ಕಾರ್ಯಕ್ರಮದಲ್ಲಿ ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತಾ ಇಲಾಖೆಗಳ ಚಟುವಟಿಕೆಗಳ ವಿಡಿಯೋ, ಇಲಾಖೆಗಳ ಪ್ರಚಾರ ಸಾಮಗ್ರಿ, ವಲಸೆ ಕಾರ್ಮಿಕರ ಹ್ಯಾಂಡ್‌ ಬುಕ್‌ ಮತ್ತು ಟೂಲ್‌ ಕಿಟ್‌ ಹಾಗೂ 150 ಐಟಿಐಗಳನ್ನು ಉನ್ನತೀಕರಣಗೊಳಿಸುವ ʼಉದ್ಯೋಗʼ ಎಂಬ ಹೆಸರಿನ ಕೈಪಿಡಿಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸ್ಕಿಲ್‌ ಕನೆಕ್ಟ್‌ ಪೋರ್ಟಲ್‌ ಅನ್ನು ಲೋಕಾರ್ಪಣೆ ಮಾಡಿದರು.

ವಿಶ್ವ ಯುವಕೌಶಲ್ಯ ದಿನಾಚರಣೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟನೆ ಮಾಡಿದರು. ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್‌ ಶೆಟ್ಟಿ, ಟಯೋಟಾ ಕಿರ್ಲೋಸ್ಕರ್‌ ಹಿರಿಯ ಉಪಾಧ್ಯಕ್ಷ ಸುದೀಪ್‌ ದಲ್ವಿ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ಮುಖ್ಯಸ್ಥರು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.  ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಸೆಲ್ವಕುಮಾರ್‌, ಜೀವನೋಪಾಯ ಇಲಾಖೆಯ ನಿರ್ದೇಶಕಿ ಮಂಜುಶ್ರೀ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿರ್ದೇಶಕ ಡಾ.ಹರೀಶ್‌ ಕುಮಾರ್‌, ಜಿಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಹೆಚ್.‌ರಾಘವೇಂದ್ರ, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‌ ಗೌಡ, ಸಿಡಾಕ್‌ ನಿರ್ದೇಶಕ ಡಾ.ವೀರಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here