Home ಬೆಂಗಳೂರು ನಗರ Netherlands Prime Minister in Bengaluru: ಕರ್ನಾಟಕ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣ, ರಾಜ್ಯದ ಇತರೆ...

Netherlands Prime Minister in Bengaluru: ಕರ್ನಾಟಕ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣ, ರಾಜ್ಯದ ಇತರೆ ನಗರಗಳಲ್ಲೂ ಹೂಡಿಕೆ ಮಾಡಿ: ನೆದರ್ಲೆಂಡ್ ನಿಯೋಗಕ್ಕೆ ಡಿಸಿಎಂ ಆಹ್ವಾನ

71
0
Karnataka is a favorite destination for capital investors, in other cities of the state too: DCM invites to Netherlands delegation
Karnataka is a favorite destination for capital investors, in other cities of the state too: DCM invites to Netherlands delegation

ಬೆಂಗಳೂರು:

“ಅತ್ಯುತ್ತಮ ಕೈಗಾರಿಕಾ ನೀತಿ, ಮೂಲಭೂತ ಸೌಕರ್ಯ, ಮಾನವ ಸಂವನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜತೆ ಸಭೆ ನಡೆಸಿದ ಡಿ.ಕೆ. ಶಿವಕುಮಾರ್ ಅವರು:” “ಕರ್ನಾಟಕ ರಾಜ್ಯ ನೆದರ್ಲೆಂಡ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ನಾವು ಬಯಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವವರ ಪೈಕಿ ಡಚ್ ಉದ್ಯಮಿಗಳು ಪ್ರಮುಖರಾಗಿದ್ದಾರೆ. ಭಾರತದಲ್ಲಿ ನೆದರ್ಲೆಂಡ್ ಉದ್ಯಮಿಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟ ರಾಜ್ಯ ಶೇ.9ರಷ್ಟು ಬಂಡವಾಳವನ್ನು ಪಡೆದಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ.”

ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಆಮೂಲಕ ದೇಶದಲ್ಲಿನ ಹೂಡಿಕೆಯಲ್ಲಿ ಶೇ.25ರಷ್ಟು ಹೂಡಿಕೆ ಕರ್ನಾಟಕ ರಾಜ್ಯದಲ್ಲಿ ಆಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್ಲೆಂಡ್ ಕಂಪನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ.

WhatsApp Image 2023 09 12 at 9.06.09 AM 1

ಡಚ್ ಕಂಪನಿಗಳ ಜತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಸಧೃಡಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಕರ್ನಾಟಕ ಹಾಗೂ ನೆದರ್ಲೆಂಡ್ ದೇಶ ಆಹಾರ ಉತ್ಪನ್ನ, ಜೈವಿಕ ತಂತ್ರಜ್ಞಾನ, ಫಾರ್ಮಾ, ಇನ್ನೋವೇಷನ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ.

ಭಾರತದಲ್ಲಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, 2016ರಿಂದಲೂ ಬಂಡವಾಳ ಆಕರ್ಷಿಸುವಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಕರ್ನಾಟಕ. ಜೈವಿಕ ತಂತ್ರಜ್ಞಾನ ಉತ್ಪನ್ನ ಹಾಗೂ ರಫ್ತಿನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಭಾರತದ ಅನ್ವೇಷಣೆ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ನಾವು ಶೇ.63ರಷ್ಟು ನವೀಕರಿಸಬಹುದಾದ ಇಂಧನದ ಮೇಲೆ ಅವಲಂಬಿತವಾಗಿದ್ದು, ನವೀಕರಿಸಬಹುದಾದ ಇಂಧನ ವಿಚಾರದಲ್ಲಿ ಮುಂಚೂಣಿಯಲ್ಲಿದ್ದೇವೆ. ವಿದ್ಯುತ್ ವಾಹನ, ಆವಿಷ್ಕಾರ, ವಸತಿ, 7 ಓಇಎಂ, 50ಕ್ಕೂ ಹೆಚ್ಚು ಕಾಪೋನೆಂಟ್ ಉತ್ಪಾದಕ ಹಾಗೂ 45ಕ್ಕೂ ಹೆಚ್ಚು ವಿದ್ಯುತ್ ವಾಹನಗಳ ಸ್ಟಾರ್ಟ್ ಅಪ್ ಗಳನ್ನು ಹೊಂದಿದ್ದೇವೆ. ವಿಶೇಷವಾಗಿ ಡಚ್ ಕಂಪನಿಗಳಿಗೆ ಉತ್ತಮ ಪ್ರೋತ್ಸಾಹ ನೀಡಲು ಅನೇಕ ನಿರ್ಧಾರ ಕೈಗೊಳ್ಳಲಾಗಿದೆ.

ನಾವು ಕೃತಕ ಬುದ್ಧಿಮತ್ತೆ(AI), ಉತ್ಪಾದನೆ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯಂತಹ ಕ್ಷೇತ್ರಗಳಿಗೆ ಪ್ರತ್ಯೇಕ ಕೈಗಾರಿಕ ನೀತಿ ಹೊಂದಿದ್ದೇವೆ. ಈ ನೀತಿಯಲ್ಲಿ 6-10 ವರ್ಷಗಳವರೆಗೆ ವಾರ್ಷಿಕ ವಹಿವಾಟಿನಲ್ಲಿ 2.25% ಬಂಡವಾಳ ಉತ್ತೇಜನ ಸಬ್ಸಿಡಿ ನೀಡಲಾಗುವುದು. ಇದರ ಜೊತೆಗೆ ನಮ್ಮಲ್ಲಿ ಏರೋಸ್ಪೇಸ್, ರಕ್ಷಣೆ, ಸಂಚಾರ, ಸಂಶೋಧನೆ ಮತ್ತು ಅಭಿವೃದ್ಧಿ, ದತ್ತಾಂಶ ಕೇಂದ್ರ, ಮತ್ತು ಜವಳಿ ಕ್ಷೇತ್ರಗಳಿಗೆ ಪ್ರತ್ಯೇಕ ನೀತಿ ಹೊಂದಲಾಗಿದ್ದು, ಪ್ರತಿ ಕ್ಷೇತ್ರದಲ್ಲೂ ಬಂಡವಾಳ ಆಕರ್ಷಣೆಗೆ ಸಹಾಯಕವಾಗಿವೆ. ಉತ್ತಮ ಕಾರ್ಮಿಕ ನೀತಿ ಮೂಲಕ ಕಂಪನಿಗಳು ಹಾಗೂ ಉದ್ಯೋಗಿಗಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗಿದೆ. ಬಂಡವಾಳ ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗ ಕರ್ನಾಟಕ ರಾಜ್ಯ 2022-23ನೇ ಸಾಲಿನಲ್ಲಿ 4.67 ಟ್ರಿಲಿಯನ್ ಬಂಡವಾಳವನ್ನು ಆಕರ್ಷಿಸಿದೆ. ಆ ಮೂಲಕ ಕರ್ನಾಟಕ ರಾಜ್ಯ 400 ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳ ತಾಣವಾಗಿದೆ.

WhatsApp Image 2023 09 12 at 9.06.08 AM

ಕರ್ನಾಟಕ ರಾಜ್ಯ ಎಲ್ಲಾ ಪ್ರಮುಖ ಮಾರುಕಟ್ಟೆಗಳಿಗೆ ಅತ್ಯುತ್ತಮ ಸಂಪರ್ಕ ವ್ಯವಸ್ಥೆ ಹೊಂದುವ ಮೂಲಕ ಭಾರತದಲ್ಲಿ ಬಂಡವಾಳ ಹೂಡಿಕೆ ಹಾಗೂ ರಫ್ತಿನಲ್ಲಿ ಅಗ್ರಸ್ಥಾನದಲ್ಲಿದೆ. 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, 47 ರಾಷ್ಟ್ರೀಯ ಹೆದ್ದಾರಿಗಳು, 145 ರಾಜ್ಯ ಹೆದ್ದಾರಿಗಳು, 3818 ಕಿ.ಮೀ ರೈಲ್ವೇ ಸಂಪರ್ಕ, 1 ದೊಡ್ಡ ಬಂದರು ಹಾಗೂ 13 ಸಣ್ಣ ಬಂದರುಗಳನ್ನು ಹೊಂದಿದೆ. ರಾಜ್ಯ ಸರ್ಕಾರ ಬಂಡವಾಳ ಆಕರ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಡಿಪಿಐಐಟಿಯ ಉದ್ಯಮಸ್ನೇಹಿ ಸೂಚ್ಯಂಕದಲ್ಲಿ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ.

ಇಡೀ ವಿಶ್ವದಲ್ಲೇ 2,050 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸುವ ಸೋಲಾರ್ ಪಾರ್ಕ್ ಅನ್ನು ಕರ್ನಾಟಕದ ಪಾವಗಡದಲ್ಲಿ ನಿರ್ಮಿಸಲಾಗಿದೆ. ದೇಶದಲ್ಲಿ ಮೊದಲು ಇವಿ ನೀತಿ ಪ್ರಕಟಿಸಿದ ರಾಜ್ಯ ಎಂದರೆ ಅದು ಕರ್ನಾಟಕ. ಬೆಂಗಳೂರು ದೇಶದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರವಾಗಿದ್ದು, ಪ್ರೈಮ್ ಗ್ಲೋಬಲ್ ಸಿಟೀಸ್ ಇಂಡೆಕ್ಸ ನಲ್ಲಿ 16ನೇ ಸ್ಥಾನ ಪಡೆದಿದೆ. ಜೊತೆಗೆ ಭಾರತದ ತಂತ್ರಜ್ಞಾನ ನಗರವಾಗಿ ಪರಿಗಣಿಸಲಾಗಿದ್ದು, ಅಮೆರಿಕದ ಕಂಪನಿಗಳಿಗೆ ನೆಚ್ಚಿನ ತಾಣವಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ, ಪ್ರತಿಭಾವಂತ ಸಂಪನ್ಮೂಲ, ಆವಿಷ್ಕಾರದ ಸಂಸ್ಕೃತಿ, ಮಾನವ ಸಂಪನ್ಮೂಲ ಬೆಂಗಳೂರಿನ ಶಕ್ತಿಯಾಗಿವೆ.

ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ. ಇನ್ನು ಅನೇಕ ಸುಂದರ ಹಾಗೂ ಪ್ರಬಲ ನಗರಗಳಿವೆ. ಈ ನಗರಗಳು ಅತ್ಯುತ್ತಮ ಮಾನವ ಸಂಪನ್ಮೂಲ ಹೊಂದಿದ್ದು, ಬೆಂಗಳೂರಿನ ಪರಿಸರವನ್ನೇ ಹೊಂದಿವೆ. ಹೀಗಾಗಿ ಕೈಗಾರಿಕೆಗಳು ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ತುಮಕೂರು, ಬೆಳಗಾವಿ, ಕಲ್ಬುರ್ಗಿ ನಗರಗಳತ್ತಲೂ ಗಮನಹರಿಸಬೇಕಿದೆ. ಈ ನಗರಗಳು ವೇಗವಾಗಿ ಬೆಳೆಯುತ್ತಿದ್ದು, ಐಟಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಈ ನಗರಗಳು ಉತ್ತಮ ಅವಕಾಶವನ್ನು ಸೃಷ್ಟಿಸಬಲ್ಲದು. ಕೈಗಾರಿಕೆಗಳು ಬೆಂಗಳೂರಿನ ಹೊರತಾಗಿ ಈ ನಗರಗಳಲ್ಲಿ ಆರಂಭಿಸಲು ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಇದರ ಪ್ರಯೋಜನವನ್ನು ಬಳಸಿಕೊಳ್ಳಿ.

ನಮ್ಮ ರಾಜ್ಯ ಭವ್ಯ ಪರಂಪರೆ ಹೊಂದಿದ್ದು, ತಂತ್ರಜ್ಞಾನ ಮತ್ತು ಉತ್ಪಾದನೆಯಿಂದ ಕೃಷಿ ಮತ್ತು ಪ್ರವಾಸೋದ್ಯಮದವರೆಗೂ ಎಲ್ಲಾ ವಲಯಗಳಿಗೆ ಸೂಕ್ತವಾಗಿದೆ. ವ್ಯಾಪಾರ ವೃದ್ಧಿ, ಆವಿಷ್ಕಾರ ಹಾಗೂ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣಕ್ಕೆ ನಾವು ಬದ್ಧವಾಗಿದ್ದೇವೆ.

ನಿಮ್ಮ ರಾಷ್ಟ್ರದ ಜತೆಗೆ ಉತ್ತಮ ಬಾಂಧವ್ಯ ಬೆಸೆದು ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಗತಿ ಸಾಧಿಸಲು ನಾವು ಇಚ್ಛಿಸುತ್ತೇವೆ. ನಿಮ್ಮ ಭವಿಷ್ಯದ ಹೆಜ್ಜೆಯಲ್ಲಿ ನಾವು ಹೇಗೆ ನಿಮಗೆ ಸಹಕಾರ ನೀಡಬೇಕು ಎಂದು ತಿಳಿಯಲು ನಾವು ಉತ್ಸುಕರಾಗಿದ್ದೇವೆ. ನಾವು ಒಂದಾಗಿ ನಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳೋಣ.” ಎಂದು ಹೇಳಿದರು

LEAVE A REPLY

Please enter your comment!
Please enter your name here