ಬೆಂಗಳೂರು:
ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ತನ್ನ ಲಿಥಿಯಂ ಬ್ಯಾಟರಿ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಎರಡು ಪಟ್ಟು ಹೆಚ್ಚಿಸುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 40 ಎಕರೆ ಜಾಗವನ್ನು ನೀಡುವಂತೆ ಎಕ್ಸೈಡ್ ಎನರ್ಜಿ ಕಂಪನಿ ಪ್ರಸ್ತಾವ ಸಲ್ಲಿಸಿದೆ.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ಮಂದಾರ್ ವಿ.ದಿಯೋ ಅವರ ನೇತೃತ್ವದಲ್ಲಿ ಕಂಪನಿ ಪ್ರತಿನಿಧಿಗಳು ಸೋಮವಾರ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಈ ಕುರಿತು ಪ್ರಸ್ತಾವ ಸಲ್ಲಿಸಿ ಮಾತುಕತೆ ನಡೆಸಿದರು.
ಕಂಪನಿಯು ಈಗಾಗಲೇ ದೇವನಹಳ್ಳಿ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ 6,000 ಗಿಗಾವಾಟ್ ಸಾಮರ್ಥ್ಯದ ಲೀಥಿಯಂ ಸೆಲ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಅದರ ನಿರ್ಮಾಣ ಕಾರ್ಯ ಕೈಗೊಂಡಿದೆ. ಅದು 2024ರಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಲಿದೆ. ಇದರ ಜೊತೆಗೆ ಉತ್ಪಾದನಾ ಸಾಮರ್ಥ್ಯವನ್ನು ಇನ್ನೂ 6,000 ಗಿಗಾವಾಟ್ ಗಳಷ್ಟು ಹೆಚ್ಚಿಸಬೇಕೆಂಬ ಯೋಜನೆಯನ್ನು ಕಂಪನಿ ಹೊಂದಿದೆ. ಈ ಎರಡೂ ಘಟಕಗಳಿಗೆ ಒಟ್ಟಾರೆ ಮಾಡುವ ಹೂಡಿಕೆ ರೂ. 6,000 ಕೋಟಿಗಳಷ್ಟು ಆಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
Exide Energy requests 40 acres of additional land to Expand Lithium Battery Production.#Exide Energy, a well-known battery manufacturing company in the country, has requested 40 acres of land to establish a new unit.
— M B Patil (@MBPatil) August 21, 2023
The company's objective is to double its lithium battery… pic.twitter.com/F2toQV1aAM
ಕಂಪನಿಯ ಈ ಪ್ರಸ್ತಾವವನ್ನು ಎಂ.ಬಿ ಪಾಟೀಲ ಅವರು ಸ್ವಾಗತಿಸಿದ್ದಾರೆ. ಎಲೆಕ್ಟ್ರಿಕ್ ವಾಹನೋದ್ಯಮವನ್ನು ರಾಜ್ಯದಲ್ಲಿ ಸದೃಢವಾಗಿ ಬೆಳೆಸಬೇಕೆಂಬ ಸರ್ಕಾರದ ಉದ್ದೇಶಕ್ಕೆ ಇದು ಪೂರಕವಾಗಿದೆ. ಕಂಪನಿಯ ಪ್ರಸ್ತಾವವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂಬರುವ 2024ರಲ್ಲಿ ಪ್ರಸ್ತಾವಿಸಲಾಗಿರುವ ಎರಡನೇ ಘಟಕದ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂಬುದು ಕಂಪನಿಯ ಉದ್ದೇಶವಾಗಿದೆ ಎಂದೂ ಅವರು ಹೇಳಿದ್ದಾರೆ.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮತ್ತಿತರರು ಇದ್ದರು. ಎಕ್ಸೈಡ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವೀರಭದ್ರ ಕೂಡ ಇದ್ದರು.