- ರಾಮನಗರದಲ್ಲಿ ಪ್ರಾಯೋಗಿಕ ಭೂ ಮರು ಮಾಪನಾ ಕಾರ್ಯ
- ಶತಮಾನಗಳ ಭೂ ವ್ಯಾಜ್ಯಕ್ಕೆ ತೆರೆ ಎಳೆಯಲು ಸರ್ಕಾರ ಯತ್ನ
- ಶೀಘ್ರದಲ್ಲೇ ರಾಜ್ಯಾದ್ಯಂತ ಭೂ ಮರು ಮಾಪನಕ್ಕೆ ಒತ್ತು
- 1925ರಲ್ಲಿ ಕೊನೆಯ ಬಾರಿ ಸರ್ವೆ ನಡೆಸಲಾಗಿತ್ತು
ರಾಮನಗರ:
ಭೂ ಸರ್ವೆ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಪರಿಣಾಮ ರೈತರೂ ಸಹ ತಮ್ಮದಲ್ಲದ ತಪ್ಪಿಗೆ ಸಾಕಷ್ಟು ನೋವನ್ನು ಅನುಭವಿಸಿದ್ದಾರೆ. ಹೀಗಾಗಿ ರೈತರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಸಲುವಾಗಿ ಶತಮಾನಗಳ ನಂತರ ಭೂ ರೀ ಸರ್ವೆ ಪ್ರಾಯೋಗಿಕ ಪರೀಕ್ಷೆಗೆ ಇಂದು ಚಾಲನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿಯಲ್ಲಿ ಬುಧವಾರ ಭೂ ಮರು ಮಾಪನ (ರೀ ಸರ್ವೆ) ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಸರ್ವೇ ನಂಬರ್ ಡಿಸ್ಪ್ಯೂಟ್ ಎಂಬುದು ಇತ್ತೀಚೆಗೆ ರೈತರ ಪಾಲಿನ ಸಾಮಾನ್ಯ ಸಮಸ್ಯೆಯಾಗಿದೆ. ತಮ್ಮದಲ್ಲದ ತಪ್ಪಿಗೆ ದಿನಂಪ್ರತಿ ಸರ್ಕಾರಿ ಕಚೇರಿಯನ್ನು ಅಲೆಯುವಂತಾಗಿದೆ” ಎಂದು ವಿಷಾಧಿಸಿದರು.
ಅಲ್ಲದೆ, “ರೈತರ ಈ ಪರಿಸ್ಥಿತಿಗೆ ಸರ್ವೇ ಇಲಾಖೆಯಲ್ಲಿನ ಸಮಸ್ಯೆಯೇ ಕಾರಣ. ಬ್ರಿಟೀಷರ ಕಾಲದಲ್ಲಿ 1925 ರಲ್ಲಿ ನಡೆದ ಭೂ ಸರ್ವೇ ಯನ್ನೇ ಆಧಾರವಾಗಿಟ್ಟುಕೊಂಡು ನಾವು ಈಗಲೂ ವ್ಯವಹರಿಸುತ್ತಿದ್ದೇವೆ. ಇದೇ ಕಾರಣಕ್ಕೆ ಇದೀಗ ಭೂ ರೀ ಸರ್ವೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಇದು ಯಶಸ್ವಿಯಾದರೆ ರಾಜ್ಯಾದ್ಯಂತ ಎಲ್ಲಾ ಕೃಷಿ ಮತ್ತು ಅರಣ್ಯ ಭೂಮಿಯನ್ನು ರೀ ಸರ್ವೆ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.
ರೀ ಸರ್ವೇ ಲಾಭವೇನು?
ಪ್ರತಿ ಹಳ್ಳಿಯ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳಿಗೆ ಸಂಬಂಧಿಸಿದಂತೆ ಈಗ ಸರ್ಕಾರದ ಬಳಿ ಇರುವುದು ನೂರು ವರ್ಷಗಳ ಹಳೆಯ ದಾಖಲೆ.
ಆದರೆ ಈ ನೂರು ವರ್ಷದಲ್ಲಿ ಕೃಷಿ ಮತ್ತು ಜನವಸತಿ ಪ್ರದೇಶಗಳಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಪ್ರತಿಯೊಂದು ಗ್ರಾಮಠಾಣಾ ಹಾಗೂ ಸರ್ವೇ ನಂ ಗಡಿಯಲ್ಲೂ ವ್ಯತ್ಯಾಸಗಳಿವೆ. ಈ ಬಗ್ಗೆ ಸರ್ಕಾರಿ ದಾಖಲೆಗಳಲ್ಲಿ ನಿಖರ ವಿವರಣೆ ಇಲ್ಲ.
ಇದಲ್ಲದೆ, ಸರ್ಕಾರಿ ಭೂ ಒತ್ತುವರಿ ಜಮೀನು ಯಾವುದು? ಹಾಗೂ ಅರಣ್ಯ ಪ್ರದೇಶದ ಗಡಿಯ ಬಗ್ಗೆಯೂ ಸಾಕಷ್ಟು ಗೊಂದಲ ಇದೆ. ಈ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಸಲುವಾಗಿಯೇ ಇದೀಗ ತಾಂತ್ರಿಕ ಭೂ ರೀ ಸರ್ವೇಗೆ ಚಾಲನೆ ನೀಡಲಾಗಿದೆ.
ಡ್ರೋನ್ ತಂತ್ರಜ್ಞಾನದ ಮೂಲಕ ಭೂ ರೀ ಸರ್ವೆ ನಡೆಸಲಾಗುತ್ತಿದೆ. ಡ್ರೋನ್ ಪ್ರತಿ ಚ.ಕಿಲೊಮೀಟರ್ ಗೆ 4000 ಕ್ಕೂ ಅಧಿಕ ಫೋಟೊ ತೆಗೆಯುತ್ತದೆ. ಈ ಫೋಟೊಗಳ ಆಧಾರದಲ್ಲಿ ವೈಜ್ಞಾನಿಕವಾಗಿ ಹಿಡುವಳಿ ಭೂಮಿ, ಗೋಮಾಳ, ಹುಲ್ ಬನ್ನಿ, ಸರ್ಕಾರಿ ಖರಾಬು, ಇನಾಮು ಮತ್ತು ಕೆರೆ ಭೂಮಿಗಳನ್ನು ಗುರುತಿಸಲಾಗುವುದು. ಈ ಮೂಲಕ ರೈತರ ಸರ್ವೇ ಡಿಸ್ಪ್ಯೂಟ್ ಗಳಿಗೆ ಶಾಶ್ವತ ಪರಿಹಾರ ಹಾಗೂ ಸರ್ಕಾರಿ ಭೂಮಿ ಗುರುತಿಸಿ ಒತ್ತುವರಿ ತೆರವು ಮಾಡಲು ಸಹಕಾರಿಯಾಗುವುದು.