Home ರಾಜಕೀಯ ಭೂ ಸುಧಾರಣಾ ಕಾಯ್ದೆ: ಮೇಲ್ಮನೆಯಲ್ಲಿ ಮತ್ತೆ ವಾಗ್ವಾದ

ಭೂ ಸುಧಾರಣಾ ಕಾಯ್ದೆ: ಮೇಲ್ಮನೆಯಲ್ಲಿ ಮತ್ತೆ ವಾಗ್ವಾದ

53
0

ಬೆಂಗಳೂರು:

ಹಿಂದಿನ ಅಧಿವೇಶನದಲ್ಲಿ ಭಾರಿ ಚರ್ಚೆಯಾಗಿ ವಾಪಸ್ಸಾಗಿದ್ದ ಭೂ ಸುಧಾರಣಾ ತಿದ್ದುಪಡಿ ವಿಧೇಯಕವು ಸೋಮವಾರದಿಂದ ಆರಂಭಗೊಂಡ ಅಧಿವೇಶನದ ಮೊದಲ ದಿನವೇ ಮಂಡನೆ ಮಾಡಿ, ಅನುಮೋದನೆಗೆ ಮುಂದಾಗಿದ್ದ ಬಿಜೆಪಿಗೆ ಹಿನ್ನಡೆಯಾಗಿದೆ.

ಹಿಂದಿನ ಅಧಿವೇಶನದಲ್ಲಿ ಮಧ್ಯರಾತ್ರಿಯವರೆಗೂ ಚರ್ಚೆ ನಡೆದ ಬಳಿಕ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸದನವನ್ನು ಮುಂದೂಡಿದ್ದರು. ಬಳಿಕ ಮತ್ತೊಂದು ಬಾರಿ ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿತ್ತು. ಆದರೆ, ವಿದೇಯಕಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣಗೊಂಡಿದ್ದರಿಂದ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ತಿದ್ದುಪಡಿ ವಿಧೇಯಕ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್, ದೇಶದಾದ್ಯಂತ ರೈತರು ಭೂ ಸುಧಾರಣಾ ಕಾಯ್ದೆಗಳ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿಯೂ ರಾಜ್ಯ ಸರಕಾರ ತರಲು ಹೊರಟಿರುವ ತಿದ್ದುಪಡಿ ವಿಧೇಯಕದ ವಿರುದ್ಧ ಹೋರಾಟ ಮಾಡುತ್ತಿದ್ದು, ಈ ಕುರಿತು ಸುದೀರ್ಘವಾಗಿ ಚರ್ಚಿಸಬೇಕಾಗಿದೆ. ಹೀಗಾಗಿ, ಸದನವನ್ನು ಮುಂದೂಡುವಂತೆ ಮನವಿ ಮಾಡಿದರು. ಆ ಸಂದರ್ಭದಲ್ಲಿ ಸಚಿವ ಆರ್.ಅಶೋಕ್ ಮಧ್ಯರಾತ್ರಿಯಾದರೂ ಪರವಾಗಿಲ್ಲ ಸದನವನ್ನು ನಡೆಸುವಂತೆ ಆಗ್ರಹಿಸಿದರು.

ಮುಂದುವರಿದು ಮಾತನಾಡಿದ ಹರಿಪ್ರಸಾದ್, ಬಿಜೆಪಿ ಸದಸ್ಯರನ್ನು ಉದ್ದೇಶಿಸಿ ನೀವು ಹೊಟ್ಟೆಗೆ ಅನ್ನ ತಿನ್ನುತ್ತೀರಲ್ಲವೆ. ಅದನ್ನು ಬೆಳೆದಿರುವುದು ರೈತರಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಹರಿಪ್ರಸಾದ್ ವಿರುದ್ಧ ಮಾತಿನ ಚಕಮಕಿ ನಡೆಸಿದರು. ಇದರ ಪರಿಣಾಮ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಸಭಾಪತಿ ಪ್ರತಾಪಚಂದ್ರಶೆಟ್ಟಿ ಸದನವನ್ನು ಮುಂದೂಡಿದರು.

ಅದಕ್ಕೂ ಮೊದಲು ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಸರಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಕಾಳಧನಿಕರಿಗೆ, ಕಾರ್ಪೋರೇಟರ್‌ಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ. ನಮ್ಮ ನೆಲ, ಜಲದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಹೊರಗಡೆಯಿಂದ ಬಂದವರು ಇಲ್ಲಿ ಭೂಮಿ ಖರೀದಿಸುತ್ತಾರೆ. ಅನಂತರ ಕೃಷಿಕರೇ ಅವರ ಕೈಕೆಳಗೆ ಆಳುಗಳಾಗಬೇಕಾಗುತ್ತದೆ ಎಂದರು.

ಕಾಂಗ್ರೆಸ್ ನ ಪ್ರಕಾಶ್ ರಾಥೋಡ್ ಪ್ರತಿಕ್ರಿಯಿಸಿ, ಇದು ಬಡವರ, ರೈತರ ವಿರೋಧಿ ಕಾಯ್ದೆ. ಕಾರ್ಪೋರೇಟರ್‌ಗಳಿಗೆ ಭೂಮಿಯನ್ನು ಮಾರಾಟ ಮಾಡುತ್ತಾ ಕರ್ನಾಟಕವನ್ನು ಕಾಂಕ್ರೀಟ್ ಜಂಗಲ್ ಮಾಡಲು ಸರಕಾರ ಹೊರಟಿದೆ. ಸರಕಾರ ರೈತರಿಗೆ ಅನುಕೂಲಕರವಾದ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

LEAVE A REPLY

Please enter your comment!
Please enter your name here