ಬೆಂಗಳೂರು/ದೊಡ್ಡಬಳ್ಳಾಪುರ:
ಭ್ರಷ್ಟಾಚಾರ ಆರೋಪದ ಹಿನ್ನೆಲೆ, ಬೆಂಗಳೂರಿನ 11 ಕಡೆ ಲೋಕಾಯುಕ್ತ ದಾಳಿ ನಡೆಸಿದ್ದು, ಭೂ ಮಾಪನ ಇಲಾಖೆ ಕಚೇರಿಗಳಲ್ಲಿ (ಎಡಿಎಲ್ ಆರ್ ಹಾಗೂ ಡಿಡಿಎಲ್ ಆರ್ ಕಚೇರಿಗಳ) ದಾಳಿ ನಡೆಸಿದ್ದಾರೆ.
ಎಡಿಎಲ್‌ಆರ್ ದೊಡ್ಡಬಳ್ಳಾಪುರ, ಡಿಡಿಎಲ್‌ಆರ್ ಬೆಂಗಳೂರು ಗ್ರಾಮಾಂತರ, ಡಿಡಿ ಕಚೇರಿ ದೊಡ್ಡಬಳ್ಳಾಪುರ ರಸ್ತೆ, ಎಡಿಎಲ್‌ಆರ್ ದೇವನಹಳ್ಳಿ, ಎಡಿಎಲ್‌ಆರ್ ಆನೇಕಲ್, ಎಡಿಎಲ್‌ಆರ್ ಕೆ.ಆರ್.ಪುರಂ, ಉತ್ತರ ವಿಭಾಗದ ಎಡಿಎಲ್‌ಆರ್, ಕಂದಾಯ ಭವನ ಡಿಡಿಎಲ್‌ಆರ್ ಡಿಸಿ ಬೆಂಗಳೂರು ನಗರ, ಕಂದಾಯ ಭವನ ಎಡಿಎಲ್‌ಆರ್ ನೆಲಮಂಗಲ, ಎಡಿಎಲ್‌ಆರ್ ಹೊಸಕೋಟೆ, ಎಡಿಎಲ್‌ಆರ್ ದಕ್ಷಿಣ ಕಂದಾಯ ಭವನ, ಎಡಿಎಲ್‌ಆರ್ ಯಲಹಂಕ ಕಚೇರಿಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.



ಲೋಕಾಯುಕ್ತ ಬಿ.ಎಸ್. ಪಾಟೀಲ್ ಪ್ರತಿಕ್ರಿಯಿಸಿ, ನಗರದ ಎಲ್ಲಾ ಎಡಿಎಲ್‌ಆರ್ ಕಚೇರಿಗಳನ್ನು ಸರ್ಪ್ರೈಸ್ ವಿಸಿಟ್ ಮಾಡಲಾಗುತ್ತಿದೆ. ರಿಜಿಸ್ಟರ್ ಸಹ ಸರಿಯಾಗಿ ನಿರ್ವಹಣೆ ಮಾಡಿಲ್ಲ, ಸಾರ್ವಜನಿಕರ ಅರ್ಜಿಗಳನ್ನು ವಿನಾಕಾರಣ ರಿಜೆಕ್ಟ್ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂದಿದ್ದೇವೆ. ನಿಜವಾಗಲೂ ಸಮಸ್ಯೆ ಇದ್ದರೆ, ಅರ್ಜಿಗಳನ್ನು ರಿಜೆಕ್ಟ್ ಮಾಡಬಹುದು ಎಂದು ತಿಳಿಸಿದರು.
ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ ದೂರು ವಿವರಿಸುವಂತೆ ಕೇಳಿ ಕರೆದೋಯ್ದರು.