ಬೆಂಗಳೂರು: ನಂದಿನಿ ಬ್ರಾಂಡ್‌ನಲ್ಲಿ ತನ್ನ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಕರ್ನಾಟಕ ಹಾಲು ಒಕ್ಕೂಟ, ಟಿ20 ಕ್ರಿಕೆಟ್ ವಿಶ್ವಕಪ್‌ಗಾಗಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ಪ್ರಾಯೋಜಕತ್ವ ನೀಡಿದೆ.
ಇದೇ ಮೊದಲ ಬಾರಿಗೆ ಕ್ರಿಕೆಟ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡುತ್ತಿದೆ. ಇದು ಕರ್ನಾಟಕದ ಜನತೆಗೆ ಹೆಮ್ಮೆಯ ಸಂಗತಿ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ಹೇಳುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಜಗದೀಶ್, ಏ.20 ರಂದು ಒಪ್ಪಂದ ಅಧಿಕೃತಗೊಂಡಿದೆ. ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಆಟಗಾರರ ಜೆರ್ಸಿಯ ತೋಳಿನ ಭಾಗದ ಮೇಲೆ ಕೆಎಂಎಫ್ ಲೋಗೋ ಇರಲಿದೆ ಎಂದು ತಿಳಿಸಿದ್ದಾರೆ.

ಎರಡೂ ತಂಡಗಳ ಆಟಗಾರರು ನಂದಿನಿ ಉತ್ಪನ್ನಗಳ ಜಾಹೀರಾತು, ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಅಭಿಯಾನ, ಫೋಟೋಶೂಟ್‌ಗಳಲ್ಲಿ ಭಾಗವಹಿಸಲಿದ್ದಾರೆ. ವಿಶ್ವಕಪ್ ವೇಳೆ ಜಾಹೀರಾತುಗಳು ಪ್ರಸಾರಗೊಳ್ಳಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮಧ್ಯಪ್ರಾಚ್ಯ, ಸಿಂಗಾಪುರ, ಭೂತಾನ್, ಮ್ಯಾನ್ಮಾರ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್ ಅಸ್ತಿತ್ವ ಹೊಂದಿದೆ. ವಿಶ್ವಕಪ್ ವೇಳೆ ಕೆಎಂಎಫ್‌ನ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.
T20 ಕ್ರಿಕೆಟ್ ವಿಶ್ವಕಪ್ 2024 ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆತಿಥ್ಯ ವಹಿಸಲಿವೆ. ಈ ವರ್ಷದ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆಯ 20 ತಂಡಗಳಿವೆ.