
ಸಕ್ರಾ ಆಸ್ಪತ್ರೆಯಲ್ಲಿ ರೋಬೋಟಿಕ್ ಪುನಶ್ಚೇತನ ವಿಭಾಗ ಉದ್ಘಾಟಿಸಿದ ಅಶ್ವತ್ಥನಾರಾಯಣ
ಬೆಂಗಳೂರು:
ಅತ್ಯುತ್ತಮ ಚಿಕಿತ್ಸೆ ಕೊಡುವ ಗುಣಮಟ್ಟದ ಆಸ್ಪತ್ರೆಗಳು ಒಂದು ಸಮಾಜದ ಜನರಿಗೆ ಆರೋಗ್ಯ ಮತ್ತು ಸುರಕ್ಷತೆಯ ಸಂದೇಶವನ್ನು ಕೊಡುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ದೇವರಬೀಸನಹಳ್ಳಿಯಲ್ಲಿ ಇರುವ ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ `ರೋಬೋಟಿಕ್ ಪುನಶ್ಚೇತನ ಚಿಕಿತ್ಸಾ ವಿಭಾಗ’ವನ್ನು ಅವರು ಶನಿವಾರದಂದು ಉದ್ಘಾಟಿಸಿ ಮಾತನಾಡಿ, ಸಕ್ರಾ ಆಸ್ಪತ್ರೆಯು ರಾಜ್ಯದ ಉಳಿದ ಭಾಗಗಳಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಮುಂದೆ ಬಂದರೆ ಎಲ್ಲ ಸಹಕಾರ ನೀಡಲಾಗುವುದು ಎಂದರು.
ದೇಶದಲ್ಲಿ ಇಂದು ಅಪಘಾತ, ಒತ್ತಡ, ಮಾನಸಿಕ ಸಮಸ್ಯೆಗಳು, ವೃತ್ತಿ ಬದುಕಿನ ಸಂಕೀರ್ಣತೆಗಳು ಮತ್ತು ಜೀವನಶೈಲಿಯಿಂದ ಉಂಟಾಗುತ್ತಿರುವ ಅನಾರೋಗ್ಯದ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇಂತಹ ಸಂದರ್ಭದಲ್ಲಿ ಸಕ್ರಾ ಆಸ್ಪತ್ರೆಯು ರೋಬೋಟಿಕ್ ಪುನಶ್ಚೇತನ ಚಿಕಿತ್ಸಾ ಕೇಂದ್ರ ಸ್ಥಾಪಿಸಿರುವುದು ಸ್ವಾಗತಾರ್ಹವಾಗಿದ್ದು, ಇದಕ್ಕೆ ಜಪಾನ್ ಸರಕಾರವು ಕೊಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಅವರು ಹೇಳಿದರು.
Also Read: Bengaluru hospital launches robotic rehab treatment
ಬೆಂಗಳೂರು ದೇಶದಲ್ಲಿ ಆರೋಗ್ಯ ಸೇವೆ ಮತ್ತು ಚಿಕಿತ್ಸೆಗಳ ತಾಣವಾಗಿ ಬೆಳೆಯಬೇಕು. ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯು ಜನರಿಗೆ ಕೈಗೆಟುಕುವ ದರದಲ್ಲಿ ಸಿಕ್ಕಬೇಕು. ಇದು ಜನರ ಪ್ರಾಥಮಿಕ ಅಗತ್ಯಗಳಲ್ಲಿ ಒಂದಾಗಬೇಕು. ಸಮಾಜದಲ್ಲಿರುವ ಜನರು ಆರೋಗ್ಯದಿಂದಿದ್ದರೆ ಮಾತ್ರ ಆರ್ಥಿಕ ಪ್ರಗತಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಜಪಾನ್ ಕಾನ್ಸುಲ್ ಜನರಲ್ ಸುಜಿತಾ ಅಕಿಕೋ, ನಟ ರಾಘವೇಂದ್ರ ರಾಜಕುಮಾರ್, ಸಕ್ರಾ ಆಸ್ಪತ್ರೆಯ ಡಾ.ಮಹೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.