Home ಬೆಂಗಳೂರು ನಗರ ಮಳೆ ನೀರಿನಿಂದ ಅನಾಹುತ ಆಗದಂತೆ ಬಿಬಿಎಂಪಿ ಮುನ್ನಚ್ಚರಿಕೆ ವಹಿಸಿದೆ ಎಂದ ಸಚಿವ ಅಶ್ವತ್ಥನಾರಾಯಣ

ಮಳೆ ನೀರಿನಿಂದ ಅನಾಹುತ ಆಗದಂತೆ ಬಿಬಿಎಂಪಿ ಮುನ್ನಚ್ಚರಿಕೆ ವಹಿಸಿದೆ ಎಂದ ಸಚಿವ ಅಶ್ವತ್ಥನಾರಾಯಣ

64
0

ಬೆಂಗಳೂರು:

ಮಳೆಯಿಂದ ನಗರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಶುಕ್ರವಾರ ಬೆಳಗ್ಗೆ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೆಂಗಳೂರು ಕಾಂಕ್ರಿಟ್ ಜಂಗಲ್ ಆಗಿ ರೂಪಾಂತರಗೊಂಡಿದ್ದು, ಮಳೆ ನೀರು ಸುನಾಯಾಸವಾಗಿ ಹರಿದು ಹೋಗುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ನಗರದ ಎಲ್ಲ ವಲಯಗಳ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದ್ದಾರೆಂದು ಹೇಳಿದರು.

ಎಲ್ಲ ಭಾಗಗಳಲ್ಲೂ ನೀರು ತಗ್ಗು ಪ್ರದೇಶಗಳಿಗೆ ನುಗ್ಗದೇ ಕೆರೆಗಳತ್ತ ಹರಿದು ಹೋಗಬೇಕು, ರಸ್ತೆಗಳ ಆಜುಬಾಜಿನಲ್ಲೇ ಇಂಗುಗುಂಡಿಗಳನ್ನು ಮಾಡಬೇಕು, ಪ್ರತಿ ಮನೆಯಲ್ಲೂ ಈಗಾಗಲೇ ಮಳೆಕುಯ್ಲು ವ್ಯವಸ್ಥೆ ಇದೆ. ಅದು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ರಾಜಕಾಲುವೆಗಳಲ್ಲಿ ಎಲ್ಲೂ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಸ ಸಂಗ್ರಹಣೆಯಾಗಿ ಹರಿಯುವ ನೀರಿಗೆ ಅಡ್ಡಿ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಮಲ್ಲೇಶ್ವರದಲ್ಲಿ 2000 ಇಂಗು ಗುಂಡಿ:

ಮಲ್ಲೇಶ್ವರದಲ್ಲೂ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುತ್ತಿತ್ತು. ಇದಕ್ಕೆ ನಾವು ಪರಿಹಾರ ಕಂಡುಕೊಂಡಿದ್ದೇವೆ, ಕ್ಷೇತ್ರದ ಉದ್ದಗಲಕ್ಕೂ 2000ಕ್ಕೂ ಹೆಚ್ಚು ಇಂಗು ಗುಂಡಿ ನಿರ್ಮಾಣ ಮಾಡಿದ್ದೇವೆ. ರಸ್ತೆಗಳಲ್ಲಿ ಹರಿದು ಪೋಲಾಗುತ್ತಿದ್ದ ಮಳೆ ನೀರು ಭೂಮಿಗೆ ಸೇರುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಕ್ಷೇತ್ರದ ಅತಿದೊಡ್ಡ ಕೆರೆಯಾದ ಸ್ಯಾಂಕಿ ಟ್ಯಾಂಕ್ʼಗೆ ಏಳು ಕಡೆಗಳಿಂದ ನೀರು ಹರಿದು ಬರುವ ವ್ಯವಸ್ಥೆ ಮಾಡಲಾಗಿದೆ. ಈಗ ಮಲ್ಲೇಶ್ವರದ ಯಾವುದೇ ಭಾಗದಲ್ಲೂ ಮಳೆನೀರು ಮನೆಗಳಿಗೆ ನುಗ್ಗುತ್ತಿಲ್ಲ. ಈ ಬಗ್ಗೆ ನಮ್ಮ ಅಧಿಕಾರಿಗಳು ಸದಾ ಎಚ್ಚರಿಕೆ ವಹಿಸುತ್ತಿದ್ದಾರೆಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here