ಬೆಂಗಳೂರು:
ದೇಶದಾದ್ಯಂತ ಸಂಚಲನ ಹುಟ್ಟಿಸಿರುವ `ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಭಾನುವಾರದಂದು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಜತೆಗೂಡಿ ಒರಾಯನ್ ಮಾಲ್ ನಲ್ಲಿ ವೀಕ್ಷಿಸಿದರು.
ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ಅವರು, `ಈ ಸಿನಿಮಾ ಇದುವರೆಗೂ ಹುದುಗಿಸಿಟ್ಟಿದ್ದ ಅನೇಕ ಸತ್ಯಗಳನ್ನು ಅನಾವರಣಗೊಳಿಸಿದೆ. ಈ ಮೂಲಕ ಕಾಶ್ಮೀರದಲ್ಲಿ ಧರ್ಮದ ಹೆಸರಿನಲ್ಲಿ ನಡೆಸಿದ ಭಯೋತ್ಪಾದನೆಯ ಕರಾಳತೆ ಜಗತ್ತಿಗೆ ಗೊತ್ತಾಗಿದೆ’ ಎಂದರು.
`ನೋಡುಗರ ಎದೆ ಝಲ್ಲೆನಿಸುವಂತಹ ಇಂತಹ ಒಂದು ಸಿನಿಮಾವನ್ನು ಮಾಡುವುದು ತುಂಬಾ ಸಾಹಸದ ಕೆಲಸವಾಗಿದೆ. ವಿವೇಕ್ ಅಗ್ನಿಹೋತ್ರಿ ಮತ್ತು ಅನುಮಪ್ ಖೇರ್ ತಂಡದವರು ಇಂಥದೊಂದು ಚಿತ್ರವನ್ನು ಕೊಡುವ ಮೂಲಕ, ಇತಿಹಾಸದ ಕತ್ತಲಿನಲ್ಲಿದ್ದ ಅಪ್ರಿಯ ಸತ್ಯಗಳನ್ನು ಹೊರತಂದಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.
`ಈ ಸಿನಿಮಾ ವಿರುದ್ಧ ಚಿತ್ರರಂಗದಲ್ಲಿ ಸಂಚುಗಳು ನಡೆದವು. ಆದರೆ, ಸಿನಿಮಾ ಮಾತ್ರ ಎಲ್ಲರ ನಿರೀಕ್ಷೆಯನ್ನೂ ತಲೆಕೆಳಗಾಗಿಸಿ 100 ಕೋಟಿ ರೂ. ಕ್ಲಬ್ ಸೇರಿದೆ. ಜತೆಗೆ, ಇಡೀ ಜಗತ್ತಿನ ಗಮನ ಸೆಳೆದಿದ್ದು, ಮನೋರಂಜನೆಯ ಜತೆಗೆ ಅರಿವನ್ನೂ ಹೇಗೆ ವಿಸ್ತರಿಸಬಹುದು ಎನ್ನುವುದಕ್ಕೆ ಈ ಚಿತ್ರ ಒಳ್ಳೆಯ ನಿದರ್ಶನವಾಗಿದೆ’ ಎಂದು ಸಚಿವರು ಹೇಳಿದರು.
ಚಿತ್ರ ವೀಕ್ಷಣೆಯಲ್ಲಿ ಮಲ್ಲೇಶ್ವರಂ ಮಂಡಲ ಬಿಜೆಪಿ ಮುಖಂಡರಾದ ಕಾವೇರಿ ಕೇದಾರನಾಥ್ , ಬಿಜೆಪಿ ಮುಖಂಡರಾದ ಡಾ.ವಾಸು ಸೇರಿದಂತೆ ಇತರರು ಇದ್ದರು.