
Karnataka Minister is fixing rates, now where are you Kempanna; questions former Chief Minister Basavaraj Bommai
‘ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕೀಯ ಪ್ರೇರಿತ ಪ್ರತಿಭಟನೆ’
ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಕ್ಕಿ ನೀಡಲು ಪೂರ್ವ ಸಿದ್ದತೆ ಮಾಡಿಕೊಳ್ಳದೇ ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜ್ಯಸರ್ಕಾರ ಕೇಂದ್ರ ಸರ್ಕಾರದ ವಿರುದ್ದ ರಾಜಕೀಯ ಪ್ರೇರಿತ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಗೊಂದಲದ ಗೂಡಾಗಿದೆ. ಉಚಿತ ಬಸ್ ಪ್ರಯಾಣ ಗ್ಯಾರಂಟಿ ಯೋಜನೆ ಅದ್ವಾನ ಆಗಿದೆ. ಸರಿಯಾಗಿ ಬಸ್ ಗಳ ವ್ಯವಸ್ಥೆ ಮಾಡದೇ ಫ್ರೀ ಬಸ್ ಯೋಜನೆ ಅಂದರೆ ಹೇಗೆ?
ಸರಿಯಾದ ಬಸ್ ಸೇವೆ ಒದಗಿಸದೇ ಇರುವುದರಿಂದ ಸಾರ್ವಜನಿಕರು ಬಾಯಿಗೆ ಬಂದಹಾಗೆ ಬೈತಾರಂತೆ, ಕೆಲಸ ಮಾಡಲು ಆಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ತೋಡಿಕೊಳ್ಳುತ್ತಿದ್ದಾರೆ.
ಹತ್ತು ಕೆಜಿ ಅಕ್ಕಿ ನೀಡುವ ವಿಚಾರದಲ್ಲೂ ಮುಂಚೆಯೇ ವ್ಯವಸ್ಥೆ ಮಾಡಿಕೊಳ್ಳದೇ ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಸರ್ಕಾರ ನಡೆಸುವವರು ಕೊಟ್ಟ ಮಾತಿನಂತೆ ನಡೆಸುಕೊಳ್ಳಲು ಆಗುತ್ತಿಲ್ಲ. ಅಕ್ಕಿಯನ್ನು ಕೇವಲ ಎಫ್ ಸಿ ಐನಿಂದಲೇ ತರಬೇಕು ಅಂತಾ ಇಲ್ಲ. ಬೇರೆ ಎಜೆನ್ಸಿಗಳು ಇವೆ.
ಯಾವುದನ್ನು ಸಿದ್ಧತೆ ಮಾಡಿಕೊಳದೇ ಪ್ರತಿಭಟನೆ ಮಾಡುತ್ತಿದಾರೆ. ಇವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲ ಎಂದು ಜನರು ಉಗಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಹಲವಾರು ಸಚಿವರು ಹಿಂದಿನ ಅವಧಿಯ ಕಾಮಗಾರಿ, ಮನೆ ನಿರ್ಮಾಣ ಎಲ್ಲವನ್ನೂ ನಿಲ್ಲಿಸಿದ್ದಾರೆ. ಸರ್ಕಾರ ಬಂದು ತಿಂಗಳು ಕಳೆದರೂ ಸಚಿವರು ತಮ್ಮ ಇಲಾಖೆಗಳ ಮಾತನಾಡುತ್ತಿಲ್ಲ. ಇನ್ನು ಮಳೆಗಾಲ ಆರಂಭವಾಗುತ್ತದೆ. ಯಾವುದೇ ಕಾಮಗಾರಿ ನಡೆಯುವುದಿಲ್ಲ. ಇಡೀ ಒಂದು ವರ್ಷದ ಕಾರ್ಯಕ್ರಮಗಳನ್ನ ಅಲ್ಲೋಲಕಲ್ಲೋಲ ಮಾಡುತ್ತಿದ್ದಾರೆ.
ಎಲ್ಲಿದ್ದೀರಿ ಕೆಂಪಣ್ಣ?:
ಹಿಂದಿನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಜೊತೆ ಸೇರಿಕೊಂಡು ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗೆಲ್ಲಿದ್ದಾರೆ. ಸಚಿವರುಗಳು ರೇಟ್ ಫಿಕ್ಸ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದವರು. ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.
ಐದು ವರ್ಷ ಅನುಮಾನ:
ಸಚಿವ ಸಂಪುಟದ ಸದಸ್ಯರಿಗೆ ಈ ಸರ್ಕಾರ 5 ವರ್ಷ ಇರುವುದು ಅನುಮಾನವಿದೆ. ಸಚಿವರುಗಳೇ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ಇರುತ್ತಾರೆ ಎಂದು ಅನುಮಾನದಿಂದ ಮಾತನಾಡುತ್ತಿದ್ದಾರೆ. ಅವರಿಗೆ ಈ ಸರ್ಕಾರ ಐದು ವರ್ಷ ಪೂರೈಸುವುದಿಲ್ಲ ಎನ್ನುವುದು ಖಾತ್ರಿಯಾದಂತಿದೆ ಎಂದು ಹೇಳಿದರು.