ಬೆಂಗಳೂರು:
ಕರ್ನಾಟಕ ರಾಜ್ಯದ ನೂತನ ಕೈಗಾರಿಕಾ ನೀತಿ 2020-2025 ರಲ್ಲಿ ಎಂಎಸ್‌ಎಂಇ ಗಳಿಗೆ ಹೆಚ್ಚಿನ ಸೌಲಭ್ಯ ಹಾಗೂ ಆದ್ಯತೆ ನೀಡಲಾಗಿದೆ. ಅಲ್ಲದೆ, ಸಾರ್ಥಕ್ ಯೋಜನೆಯ ಮೂಲಕ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಈ ಬಗ್ಗೆ ಉದ್ಯಮಿಗಳಲ್ಲಿ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಲೆಕ್ಕಪರಿಶೋಧಕರ ಸಂಘದ ಪದಾಧಿಕಾರಿಗಳಿಗೆ ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಜಗದೀಶ್ ಶೆಟ್ಟರ್ ಕರೆ ನೀಡಿದರು.
ಇಂದು ವಿಶ್ವ ಎಂಎಸ್‌ಎಂಇ ದಿನದ ಅಂಗವಾಗಿ ಬೆಂಗಳೂರು ಬ್ರಾಂಚ್ ಆಫ್ ಎಸ್‌ಐಆರ್‌ಸಿ – ದ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ – ಎಂಎಸ್‌ಎಂಇ ಮತ್ತು ಸ್ಟಾರ್ಟ್ ಅಪ್ ಆಫ್ ಐಸಿಎಐ ಸಮಿತಿ, ಪೀಣ್ಯ ಕೈಗಾರಿಕಾ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವೆಬಿನಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಲೆಕ್ಕಪರಿಶೋಧಕರು ಕೈಗಾರಿಕೆಗಳು ಸಫಲತೆಯಾಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಈ ಕೈಗಾರಿಕೆಗಳ ಅನುಕೂಲ ಹಾಗೂ ಅಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿವೆ. ರಾಜ್ಯದಲ್ಲೂ ಎಂಎಸ್‌ಎಂಇ ಗಳ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ನೂತನ ಕೈಗಾರಿಕಾ ನೀತಿಯಲ್ಲಿ ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ಆದ್ಯತೆಯನ್ನು ನೀಡಲಾಗಿದೆ. ಅಲ್ಲದೆ, ಕ್ರಾಂತಿಕಾರಿ ನೀತಿ ಹಾಗೂ ಕಾಯ್ದೆಗಳಾದ ಕೈಗಾರಿಕಾ ಸೌಲಭ್ಯ ಕಾಯ್ದೆ ಹಾಗೂ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ನಂತಹ ಕ್ರಮಗಳ ದೇಶದಲ್ಲೇ ಮೊದಲಾಗಿದ್ದು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇದ್ದಂತಹ ಹಲವಾರು ಅಡೆತಡೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
On the occasion of #WorldMSMEday, attended a webinar organized in association with Bengaluru branch of SIRC – The institute of Chartered accountans of India – MSME and Start Up of ICAI committee, Peenya Industrial Union and addressed the participants.#InvestInKarnataka pic.twitter.com/jQxamzZ2px
— Jagadish Shettar (@JagadishShettar) June 27, 2021
ಅಲ್ಲದೆ, ಸಾರ್ಥಕ್ ಆನ್‌ಲೈನ್ ಪ್ಲಾಟ್‌ಫಾರಂ ಮುಖಾಂತರ ಸಣ್ಣ ಕೈಗಾರಿಕೆಗಳು ಮತ್ತು ಹಲವಾರು ಪಾಲುದಾರರ ಮಧ್ಯೆ ಸಂಪರ್ಕ ಕೊಂಡಿಯನ್ನು ನಿರ್ಮಿಸಿದ್ದೇವೆ. ಇದರ ಮೂಲಕ ಸಣ್ಣ ಕೈಗಾರಿಕೆಗಳು ಕಚ್ಚಾವಸ್ತುಗಳ ಖರೀದಿ, ಹಂಚಿಕೆದಾರರೊಂದಿಗೆ ಸಂಫರ್ಕ, ಕೌಶಲ್ಯ ಹೊಂದಿದ ಕಾರ್ಮಿಕರೊಂದಿಗೆ ಹೀಗೆ ಹತ್ತು ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕೈಗಾರಿಕೆಗಳು ಹಾಗೂ ಉದ್ಯಮಿಗಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಲೆಕ್ಕಪರಿಶೋಧಕರು ಈ ಎಲ್ಲಾ ಯೋಜನೆಗಳ ಬಗ್ಗೆ ತಮ್ಮ ಸಂಘದ ಅಡಿಯಲ್ಲಿ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ವೆಬಿನಾರ್ ನಲ್ಲಿ ಬೆಂಗಳೂರು ಬ್ರಾಂಚ್ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷರಾದ ಬಿ.ಟಿ ಶೆಟ್ಟಿ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷರಾದ ಸಿ ಪ್ರಕಾಶ್, ಐಸಿಎಐ ಕಾರ್ಯದರ್ಶಿಗಳಾದ ಪನ್ನರಾಜ್, ನಿಕಟಪೂರ್ವ ಅಧ್ಯಕ್ಷರಾದ ರವೀಂದ್ರ ಕೋರೆ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.