ಬೆಂಗಳೂರು:
ಕರ್ನಾಟಕ ಮತ್ತು ಜಪಾನ್ ನಡುವಿನ ಸಂಬಂಧ ಮೊದಲಿನಿಂದಲೂ ರಚನಾತ್ಮಕವಾಗಿದೆ. ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಾಜ್ಯ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಜಪಾನಿನ ಕಂಪೆನಿಗಳು ರಾಜ್ಯದಲ್ಲಿ ಮತ್ತಷ್ಟು ಹೆಚ್ಚಿನ ಬಂಡವಾಳ ಹೂಡಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಜಪಾನ್ ದೇಶದ ಸಂಸದೀಯ ನಿಯೋಗದ ಸದಸ್ಯರ ಜತೆ ಮಾತುಕತೆ ನಡೆಸಿದ ಅವರು, ರಾಜ್ಯದಲ್ಲಿ ಟೊಯೋಟಾ, ಹಿಟಾಚಿ, ಮಿತ್ಸುಬಿಶಿ, ಹೋಂಡಾ, ಮಕಿಟಾ, ಮಕಿನೋ ಸೇರಿದಂತೆ ಜಪಾನಿನ 525ಕ್ಕೂ ಹೆಚ್ಚು ಕಂಪೆನಿಗಳು ನೆಲೆ ಹೊಂದಿದ್ದು, ಕೈಗಾರಿಕಾ ಚಟುವಟಿಕೆಗಳನ್ನು ನಡೆಸುತ್ತಿವೆ ಎಂದರು.
ಹಾಗೆಯೇ, ತುಮಕೂರಿನಲ್ಲಿ ಪ್ರತ್ಯೇಕ ಜಪಾನ್ ಕೈಗಾರಿಕಾ ಟೌನ್ ಶಿಪ್ ಇದೆ. ಜೊತೆಗೆ, ಎರಡೂ ದೇಶಗಳ ನವೋದ್ಯಮಗಳ ನಡುವಿನ ನೆರವಿಗೆ ಜಪಾನ್-ಇಂಡಿಯಾ ಸ್ಟಾರ್ಟಪ್ ಹಬ್ ಎಂಬ ಆನ್‍ಲೈನ್ ವೇದಿಕೆಯೂ ಇದೆ. ತಂತ್ರಜ್ಞಾನ ಪರಿಣತಿಗೆ ಹೆಸರಾಗಿರುವ ಜಪಾನಿನ ಮತ್ತಷ್ಟು ಕಂಪೆನಿಗಳು ರಾಜ್ಯಕ್ಕೆ ಬರಬೇಕು ಎಂದು ಅವರು ಆಹ್ವಾನ ನೀಡಿದರು.
ರಾಜ್ಯದಲ್ಲಿ ಮತ್ತಷ್ಟು ಜಪಾನ್ ಹೂಡಿಕೆಗೆ ಅಗತ್ಯ ಉಪಕ್ರಮ
— M B Patil (@MBPatil) January 10, 2024
ಭಾರತದಲ್ಲಿನ ಜಪಾನ್ ಕಾನ್ಸೋಲ್ ಜನರಲ್ ಶ್ರೀ #NakaneTsutomu ಹಾಗೂ ಆ ದೇಶದ ಸಂಸದೀಯ ನಿಯೋಗದ ಸದಸ್ಯರು ಈ ದಿನ ನನ್ನನ್ನು ಭೇಟಿಮಾಡಿ ಮಾತುಕತೆ ನಡೆಸಿದರು.
ಕರ್ನಾಟಕ ಮತ್ತು ಜಪಾನ್ ನಡುವಿನ ಸಂಬಂಧ ಮೊದಲಿನಿಂದಲೂ ರಚನಾತ್ಮಕವಾಗಿದೆ. ಇದನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ರಾಜ್ಯ… pic.twitter.com/FgiXCkNuHz
ರಾಜ್ಯವು ಇತ್ತೀಚಿನ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆ, ಮಶೀನ್ ಲರ್ನಿಂಗ್, ವಿದ್ಯುಚ್ಚಾಲಿತ ವಾಹನಗಳ ತಯಾರಿಕೆ ಮುಂತಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕ ಮಟ್ಟದ ಸಂಶೋಧನಾ ಕೇಂದ್ರಗಳನ್ನೂ ಹೊಂದಿದೆ. ಜಪಾನಿನ ಹೂಡಿಕೆದಾರರು ಇವುಗಳ ಲಾಭವನ್ನು ಪಡೆದುಕೊಂಡು, ಕರ್ನಾಟಕದಲ್ಲಿಯೆ ತಮ್ಮ ಉತ್ಪಾದನಾ/ತಯಾರಿಕಾ ಚಟುವಟಿಕೆಗಳನ್ನು ಆರಂಭಿಸಬೇಕು ಎಂದು ಎಂ.ಬಿ.ಪಾಟೀಲ್ ಕೋರಿದರು.
ವಾಣಿಜ್ಯ ವಹಿವಾಟು ಮತ್ತು ವಿದೇಶಿ ನೇರ ಹೂಡಿಕೆಯಲ್ಲಿ ಎರಡೂ ದೇಶಗಳ ನಡುವೆ ಒಳ್ಳೆಯ ನಂಟಿದೆ. ಜಪಾನ್ ದೇಶವು ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ರಾಷ್ಟ್ರಗಳ ಪೈಕಿ ಐದನೆಯ ಸ್ಥಾನದಲ್ಲಿದೆ. ರಾಜ್ಯ ಸರಕಾರವು ರೂಪಿಸಿರುವ 2020-25ರ ನಡುವಿನ ಕೈಗಾರಿಕಾ ನೀತಿಯಲ್ಲಿ ಹತ್ತು ಹಲವು ಉದ್ಯಮಸ್ನೇಹಿ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಅವರು ಜಪಾನ್ ನಿಯೋಗಕ್ಕೆ ಮನದಟ್ಟು ಮಾಡಿಕೊಟ್ಟರು.
ಜಪಾನ್ ನಿಯೋಗದಲ್ಲಿ ಆ ದೇಶದ ವಿವಿಧ ಪಕ್ಷಗಳ ಸಂಸದರಾದ ಹೋಂಡಾ ತಾರೋ, ಕವಾಸಕಿ ಹಿದೆಸ್ತೋ, ಯಮಾಗುಚಿ ಸುಸುಮು, ಕೋಬಯಾಶಿ ಕಝುಹಿರೋ ಮತ್ತು ಬೆಂಗಳೂರಿನಲ್ಲಿರುವ ಜಪಾನ್ ಕಾನ್ಸುಲ್ ಜನರಲ್ ನಕಾನೆ ಸುಟೋಮು, ಡೆಪ್ಯುಟಿ ಕಾನ್ಸುಲ್ ಜನರಲ್ ಕಯಾ ಹೊಕುಟೋ ಇದ್ದರು. ರಾಜ್ಯ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.