ಬೆಂಗಳೂರು:
ಪವರ್ ಇಲಾಖೆಯಲ್ಲಿ ಸಂಸ್ಕೃತಿ ತರುವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪವರ್ ತುಂಬುವ ಕೆಲಸ ಮಾಡುತ್ತೇನೆ ಎಂದು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ದಿನ ಆಶ್ವಾಸನೆ ನೀಡಿದ್ದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಆ ನಿಟ್ಟಿನಲ್ಲಿ ಚಾರಿತ್ರಿಕ ಆದೇಶ ಹೊರಡಿಸು ಮೂಲಕ ದೃಢ ಅಡಿ ಇಟ್ಟಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಬಲಪಡಿಸಿ, ಅದರ ಕಾರ್ಯಕ್ರಮಗಳ ಅನುಷ್ಠಾನ ಮತ್ತು ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಅಧಿಕಾರ ವಿಕೇಂದ್ರೀಕರಣ ಅವಶ್ಯ ಎಂದು ಹೇಳಿದ್ದ ಸಚಿವ ಸುನಿಲ್ ಕುಮಾರ್ ಅದರಂತೆ ರಾಜ್ಯದ ನಾಲ್ಕೂ ಕಂದಾಯ ವಿಭಾಗದ ವಲಯವಾರು ಜಂಟಿ ನಿರ್ದೇಶಕರ ನೇಮಕಾತಿ ಮಾಡಿ ಆದೇಶ ಹೊರಡಿಸಲು ಸೂಚಿಸಿದ್ದರು. ಅದರಂತೆ ನೆನ್ನೆ ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಕಳೆದ ತಿಂಗಳು ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರುಗಳ ಮಂಥನ ಸಭೆಯಲ್ಲಿ ನಾಲ್ಕೂ ವಲಯಗಳಿಗೆ ಜಂಟಿ ನಿರ್ದೇಶಕರ ನೇಮಕಾತಿ ಮಾಡುವುದಾಗಿ ಭರವಸೆ ನೀಡಿದ್ದ ಸಚಿವ ಸುನಿಲ್ ಕುಮಾರ್ ಈ ಆದೇಶ ಹೊರಡಿಸುವ ಮೂಲಕ ಅದನ್ನು ಈಡೇರಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ದೃಷ್ಟಿಯಿಂದ ಹಾಗೂ ರಾಜ್ಯದ ಎಲ್ಲೆಡೆಯಿಂದ ಸಾಹಿತಿಗಳು, ಕಲಾವಿದರು, ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕೇಂದ್ರ ಕಚೇರಿಗೇ ಬರುವ ಅನಿವಾರ್ಯತೆಯನ್ನು ತಪ್ಪಿಸಿ ಆಯಾ ವಲಯವಾರು ಜಂಟಿ ನಿರ್ದೇಶಕರುಗಳ ಬಳಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಬೆಂಗಳೂರು, ಕಲಬುರ್ಗಿ, ಬೆಳಗಾವಿ ಮತ್ತು ಮೈಸೂರು ವಲಯಗಳಲ್ಲಿ ವಲಯವಾರು ಜಂಟಿ ನಿರ್ದೇಶಕರನ್ನು ನೇಮಕ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಹಾಗೂ ಅಧಿಕಾರ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಈ ವಲಯವಾರು ಜಂಟಿ ನಿರ್ದೇಶಕರ ನೇಮಕಾತಿ ಮಾಡಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆಗೆ ವ್ಯಾಪಕ ಸಿದ್ಧತೆ ಮಾಡಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳ ಒಳಗೆ ಎಲ್ಲಾ ಜಂಟಿ ನಿರ್ದೇಶಕರು ತಮಗೆ ಸೂಚಿಸಿದ ವಲಯ ಕಚೇರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕೆಂದು ಹಾಗೂ ನೂರು ದಿನಗಳ ಕಾರ್ಯಯೋಜನೆ ಸಿದ್ಧಪಡಿಸಬೇಕೆಂದು ಆದೇಶದಲ್ಲಿ ಹೇಳಲಾಗಿದೆ.
ವಿವರ
• ಕೇಂದ್ರ ಕಚೇರಿಯಲ್ಲಿ ಇದ್ದ (ಸುವರ್ಣ ಕರ್ನಾಟಕ) ಜಂಟಿ ನಿರ್ದೇಶಕರ ಹುದ್ದೆ ಬೆಂಗಳೂರಿನಲ್ಲಿಯೇ ಮುಂದುವರೆಯುತ್ತದೆ.
• ಆಡಳಿತಾಧಿಕಾರಿ, ರಂಗಾಯಣ, ಧಾರವಾಡ ಈ ಹುದ್ದೆಯನ್ನು ಕೇಂದ್ರ ಕಚೇರಿ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಳಾಂತರಿಸಲಾಗಿದೆ.
• ಜಂಟಿ ನಿರ್ದೇಶಕರು (ಸಾಮಾನ್ಯ) ಹುದ್ದೆಯನ್ನು ಬೆಂಗಳೂರು ವಿಭಾಗ ಜಂಟಿ ನಿರ್ದೇಶಕರಾಗಿ ಸ್ಥಳಾಂತರಿಸಲಾಗಿದೆ.
• ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರು (ಆಡಳಿತ) ಹುದ್ದೆಯನ್ನು ಮೈಸೂರು ವಿಭಾಗದ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಳಾಂತರಿಸಲಾಗಿದೆ.
• ಕೇಂದ್ರ ಕಚೇರಿಯ ಜಂಟಿ ನಿರ್ದೇಶಕರು (ಕಾರ್ಯಕ್ರಮ) ಈ ಹುದ್ದೆಯನ್ನು ಕಲಬುರ್ಗಿ ವಲಯದ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.
• ಜಂಟಿ ನಿರ್ದೇಶಕರು, ಶಿವಮೊಗ್ಗ ರಂಗಾಯಣ ಈ ಹುದ್ದೆಯನ್ನು ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರ ಹುದ್ದೆಗೆ ಸ್ಥಳಾಂತರಿಸಲಾಗಿದೆ.
• ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿಯ ಹುದ್ದೆಗೆ ರಿಜಿಸ್ಟ್ರಾರ್ ಸಂಗೀತ ನೃತ್ಯ ಅಕಾಡೆಮಿ ಹುದ್ದೆಯನ್ನು ಸ್ಥಳಾಂತರಿಸಲಾಗಿದೆ.
• ಸಂಗೀತ ನೃತ್ಯ ಅಕಾಡೆಮಿ ರಿಜಿಸ್ಟ್ರಾರ್ ಹುದ್ದೆಗೆ ಕೇಂದ್ರ ಕಚೇರಿಯಲ್ಲಿದ್ದ ಸಹಾಯಕ ನಿರ್ದೇಶಕರ ಹುದ್ದೆಯನ್ನು ಸ್ಥಳಾಂತರಿಸಿದೆ.
• ಹಾಗೆಯೇ ಧಾರವಾಡ ರಂಗಾಯಣ ಆಡಳಿತಾಧಿಕಾರಿ ಹುದ್ದೆಗೆ ರಿಜಿಸ್ಟ್ರಾರ್ ಕರ್ನಾಟಕ ಲಲಿತಕಲಾ ಅಕಾಡೆಮಿ ಹುದ್ದೆಯನ್ನು ಸ್ಥಳಾಂತರಿಸಲಾಗಿದೆ.
• ಹಾಗೆಯೇ ರಿಜಿಸ್ಟ್ರಾರ್ ಕರ್ನಾಟಕ ಲಲಿತಕಲಾ ಅಕಾಡೆಮಿ ಹುದ್ದೆಗೆ ಕೇಂದ್ರ ಕಚೇರಿಯ ಸಹಾಯಕ ನಿರ್ದೇಶಕರು (ಕಾರ್ಯಕ್ರಮ) ಹುದ್ದೆಯನ್ನು ಸ್ಥಳಾಂತರಿಸಿದೆ.
ಈ ಎಲ್ಲಾ ಹುದ್ದೆಗಳಿಗೆ ಸಂಬಂಧಪಟ್ಟ ಅಧಿಕೃತ ಆದೇಶವನ್ನು ನೆನ್ನೆ ಹೊರಡಿಸಲಾಗಿದೆ. ಈ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಡಳಿತ ವಿಕೇಂದ್ರೀಕರಣ ಹಾಗೂ ಸುಧಾರಣೆಗೆ ದೃಢ ಹೆಜ್ಜೆ ಇಡಲಾಗಿದೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಸುಧಾರಣಾ ಕ್ರಮ ಅನುಷ್ಠಾನಕ್ಕೆ ತರುವಲ್ಲಿ ಸಚಿವ ಸುನಿಲ್ ಕುಮಾರ್ ದೃಢ ಹೆಜ್ಜೆ ಇಟ್ಟಿದ್ದಾರೆ.