ಬೆಂಗಳೂರು:
ನೂತನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ವಿ. ಸುನೀಲ್ ಕುಮಾರ್ ರವರು ಕನ್ನಡ ಅಭಿವೃದ್ದಿ ಪ್ರಾಧಿಕಾರ ಕನ್ನಡ ಕಾಯಕ ವರ್ಷದ ಅಡಿಯಲ್ಲಿ ಕೈಗೊಂಡಿರುವ ಅನುವಾದ ಕಮ್ಮಟಕ್ಕೆ ಇಂದು ಬೆಳಿಗ್ಗೆ ಧಿಡೀರ್ ಭೇಟಿ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕನ್ನಡ ಭವನದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆಯಾಗಿರುವ ಸಭಾಂಗಣವನ್ನು ನವೀಕರಿಸಿ ಕನ್ನಡ ಜಗಲಿ ಹೆಸರಿನಲ್ಲಿ ನಿನ್ನೆಯಷ್ಟೇ ಉದ್ಘಾಟಿಸಿ ಅನುವಾದ ಕಮ್ಮಟವೊಂದನ್ನು ಪ್ರಾರಂಭಿಸಲಾಗಿತ್ತು.
ಮಾನ್ಯ ಸಚಿವರು ಇಂದು ಬೆಳಿಗ್ಗೆ ಕನ್ನಡ ಭವನಕ್ಕೆ ಭೇಟಿ ನೀಡಿ, ಅನುವಾದ ಕಮ್ಮಟದಲ್ಲಿ ಭಾಗಿಯಾದರು. ಅನುವಾದ ಕಮ್ಮಟದಲ್ಲಿದ್ದ ೨೬
ಅಭ್ಯರ್ಥಿಗಳು ಹಾಗೂ ಸಂಯೋಜಕರೊಂದಿಗೆ ಕೆಲ ಕಾಲ ಕಳೆದ ಸಚಿವರು, ಕನ್ನಡದ ನಿರಂತರತೆಗಾಗಿ, ಇಂತಹ ಕಮ್ಮಟಗಳು ಕಾರ್ಯಾಗಾರಗಳು ಸಾಗುತ್ತಲೇ ಇರಬೇಕು, ಕನ್ನಡ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು ಎಂದು ತಿಳಿಸಿದರು.
ಭೇಟಿಯ ವೇಳೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರು ಹಾಗೂ ಅನುವಾದ ಕಮ್ಮಟದ ಸಂಯೋಜಕರಾದ ಪ್ರೊ. ಅಬ್ದುಲ್ ರೆಹಮಾನ್ ಪಾಷ ಹಾಗೂ ರೋಹಿತ್ ಚಕ್ರತೀರ್ಥ ಕಮ್ಮಟದಲ್ಲಿ ಉಪಸ್ಥಿತರಿದ್ದರು.