
ಬೆಂಗಳೂರು:
ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಯನ್ನ ಶ್ಲಾಘಿಸಿದರು.
ಬೆಂಗಳೂರಿನಲ್ಲಿ ಇಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ರಾಜ್ಯ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿರ್ಮಲಾನಂದನಾಥ ಸ್ವಾಮೀಜಿ ಅವರು: “ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾದ ಬಳಿಕ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ವಿಶೇಷವಾಗಿ ರಾಜ್ಯದ ಎಲ್ಲ ಆಯುರ್ವೇದಿಕ್ ಕಾಲೇಜು ಸಂಸ್ಥೆಗಳ ಮ್ಯಾನೇಜ್ ಮೆಂಟ್ ನವರು ಖುಷಿಯಾಗಿದ್ದಾರೆ,” ಎಂದು ಹೇಳಿದರು.
ಪ್ರತಿ ವರ್ಷ ಆಯುರ್ವೇದಿಕ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಗೊಂದಲದ ಗೂಡಾಗಿತ್ತು. ಶಿಕ್ಷಣ ಸಂಸ್ಥೆಗಳು ಸಾಕಷ್ಟು ತೊಂದರೆ ಎದುರಿಸಬೇಕಾಗಿತ್ತು. ಆದರೆ, ದಿನೇಶ್ ಗುಂಡೂರಾವ್ ಅವರು ಆರೋಗ್ಯ ಸಚಿವರಾದ ಬಳಿಕ ಒಂದೇ ಸಭೆಯಲ್ಲಿ ಸಂಸ್ಥೆಯವರ ಸಮಸ್ಯೆಗಳನ್ನ ಆಲೀಸಿ ಪರಿಹರಿಸಿಕೊಟ್ಟಿದ್ದಾರೆ ಎಂದು ನಿರ್ಮಲಾನಂದನಾಥ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.