Home ಬೆಂಗಳೂರು ನಗರ Karnataka RDPR Minister Priyank Kharge | 533 ಗ್ರಾಮ ಹಾಗೂ 57 ಬಹುಗ್ರಾಮ ನಳ...

Karnataka RDPR Minister Priyank Kharge | 533 ಗ್ರಾಮ ಹಾಗೂ 57 ಬಹುಗ್ರಾಮ ನಳ ಸಂಪರ್ಕ ಕಾಮಗಾರಿಗಳ ತಪಾಸಣ ಕಾರ್ಯ ಆರಂಭ: ಸಾರ್ವಜನಿಕ ದೂರು ಆಧರಿಸಿ ಕ್ರಮ: ಪ್ರಿಯಾಂಕ್ ಖರ್ಗೆ

36
0
Karnataka RDPR Minister Priyank Kharge | Inspection of 533 village and 57 multi-village pipe connection works started: Action based on public complaint
Karnataka RDPR Minister Priyank Kharge | Inspection of 533 village and 57 multi-village pipe connection works started: Action based on public complaint

ಬೆಂಗಳೂರು:

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಗ್ರಾಮೀಣ ಭಾಗಗಳಿಗೆ ನೀರು ಸರಬರಾಜು ಮಾಡಲು ರಾಜ್ಯದ ವಿವಿದೆಡೆ ಕೈಗೆತ್ತಿಕೊಂಡಿರುವ ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದಲ್ಲಿ ಸುಧಾರಣೆ ತರಲು ಥರ್ಡ್ ಪಾರ್ಟಿ ಏಜೆನ್ಸಿ ಮೂಲಕ ವಿಸ್ತೃತ ತಪಾಸಣೆಯನ್ನು ನಡೆಸಸಲು ಆರಂಭಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಪಾಸಣೆ ಕಾರ್ಯ ಕೈಗೆತ್ತಿಕೊಂಡಿರುವ ಬ್ಯೂರೋ ವೆರಿಟಾಸ್ ಇಂಡಿಯಾ ಬಾಹ್ಯ ಸಂಸ್ಥೆಯೊಂದಿಗೆ ಸಭೆ ನಡೆಸಿದ ಸಚಿವರು ಗ್ರಾಮೀಣ ನಳಸಂಪರ್ಕ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ಬಂದ ದೂರುಗಳನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಸಂಸ್ಥೆ ನಡೆಸುತ್ತಿರುವ ತಪಾಸಣ ಕ್ರಮದ ವಿವರಗಳನ್ನು ಸಚಿವ ಖರ್ಗೆ ಅವರು ಪರಿಶೀಲಿಸಿ ಹಲವಾರು ಸಲಹೆಗಳನ್ನು ನೀಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮೀಣ ನಳ ಸಂಪರ್ಕ ಕಾಮಗಾರಿಗಳ ಭೌತಿಕ ಆಯಾಮಗಳು, ನೀರಿನ ಗುಣಮಟ್ಟ ಮುಂತಾದ ಪರೀಕ್ಷೆಗಳನ್ನು ಕಾಮಗಾರಿಗಳಿಗೆ ತೊಡಕಾಗದಂತೆ ತಪಾಸಣೆ ಮಾಡಲಾಗುತ್ತಿದೆ. ಭೂಮಿಯಲ್ಲಿ ಹುದುಗಿಸಿರುವ ಕೊಳವೆಗಳ ಗುಣಮಟ್ಟ, ಕೊಳವೆಗಳನ್ನು ಭೂಮಿಯಲ್ಲಿ ಹಾಗೂ ಭೂಮಿಯ ಮೇಲೆ ಹಾಯಿಸುವಾಗ ತೆಗೆದುಕೊಳ್ಳಲಾಗಿರುವ ಸುರಕ್ಷತಾ ಕ್ರಮಗಳು, ಸಂಪರ್ಕಕ್ಕೆ ಅಳವಡಿಸಲಾಗುವ ನಲ್ಲಿ ಹಾಗೂ ಸಾಮಗ್ರಿಗಳ ಗುಣಮಟ್ಟ ಹಾಗೂ ಪೂರೈಸಲಾಗುವ ನೀರಿನ ಗುಣಮಟ್ಟವನ್ನು ತಪಾಸಣೆ ಮಾಡಲಾಗುತ್ತಿದೆ.

ರಾಜ್ಯದ 1500 ಗ್ರಾಮಗಳಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಗಳನ್ನು ಒಳಗೊಂಡಂತೆ ಈ ವಿಸ್ತೃತ ಪರೀಕ್ಷಾ ಕಾರ್ಯ ನಡೆಸಿ, 60 ದಿನಗಳ ಒಳಗೆ ವರದಿಯನ್ನು ಸಲ್ಲಿಸಲು ಸಂಸ್ಥೆಗೆ ಸೂಚಿಸಲಾಗಿದೆ. ಈ ತಿಂಗಳ (ಅಕ್ಟೋಬರ್) 09ರಿಂದ ಸಂಸ್ಥೆಯು ತನ್ನ ತಪಾಸಣ ಕಾರ್ಯ ಆರಂಭಿಸಿದ್ದು ಚಟುವಟಿಕೆಗಳು ಪ್ರಗತಿಯಲ್ಲಿದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ಸಚಿವರಿಗೆ ತಿಳಿಸಿದರು. ರಾಜ್ಯದ 14 ಜಿಲ್ಲೆಗಳಲ್ಲಿ 82 ತಾಲ್ಲೂಕುಗಳ 533 ಗ್ರಾಮಗಳಲ್ಲಿ ಹಾಗೂ 57 ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮಗಾರಿಗಳ ತಪಾಸಣೆ ನಡೆಯುತ್ತಿದೆ ಎಂದೂ ಹೇಳಿದರು.

ಗ್ರಾಮಗಳಲ್ಲಿ ತಪಾಸಣೆ ನಡೆಯುವ ಸಂದರ್ಭದಲ್ಲಿ ಗ್ರಾಮೀಣ ನೀರು ಸರಬರಾಜು ಇಲಾಖೆಯ ತಾಂತ್ರಿಕ ಅಧಿಕಾರಿಗಳು ಜೊತೆಯಲ್ಲಿದ್ದು, ಪತ್ತೆಯಾಗುವ ನ್ಯೂನ್ಯತೆಗಳನ್ನು ಸರಿಪಡಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಯ ಆಯುಕ್ತ ನಾಗೇಂದ್ರ ಪ್ರಸಾದ್, ಮುಖ್ಯ ಅಭಿಯಂತರ ಏಜಾಜ್ ಅಹಮದ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here