Home ಶಿಕ್ಷಣ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭ.

6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ಪುನಾರಂಭ.

51
0
Karnataka resumes classes 6 to 8

ಚಾಕೋಲೇಟ್, ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್

ಬೆಂಗಳೂರು:

ಒಂದೂವರೆ ವರ್ಷದ ಬಳಿಕ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ರಾಜ್ಯದಲ್ಲಿ ಪುನಾರಂಭವಾಗಿದ್ದು, ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ತಿಳಿಸಿದರು.

ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಕರ್ನಾಟಕ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳಿಗೆ ಚಾಕೋಲೇಟ್, ಗುಲಾಬಿ ಹೂ ನೀಡಿ ಸ್ವಾಗತಿಸಿದರು.

ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಖುಷಿಯಿಂದ ಬರ ಮಾಡಿಕೊಂಡರು.

Karnataka resumes classes 6 to 8

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ‘ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ತರಗತಿಗಳಲ್ಲಿ ಒಂದು ಬೆಂಚಿಗೆ ಇಬ್ಬರು ಮಕ್ಕಳನ್ನು ಮಾತ್ರ ಕೂರಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪಾಲಕರು, ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಪ್ರೌಢ ಶಾಲೆಯ 9 ಮತ್ತು 10ನೇ ತರಗತಿ ಮತ್ತು ಪಿಯು ತರಗತಿಗಳು ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳು, ಕೋವಿಡ್ -19 ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ, ಒಪ್ಪಿಗೆ ಪಡೆದು ಸೂಕ್ತ ಸಿದ್ದತೆಗಳನ್ನು ಮಾಡಿಕೊಂಡು 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ’ ಎಂದು ಸಚಿವ ಬಿ.ಸಿ ನಾಗೇಶ್ ನುಡಿದರು.

‘1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಆರಂಭಕ್ಕೆ ಎಂದಿನಂತೆ ತಜ್ಞರ ಅಭಿಪ್ರಾಯ, ಒಪ್ಪಿಗೆ ಪಡೆಯಲಾಗುತ್ತದೆ. 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳಲ್ಲಿ ಕಂಡು ಬರುವ ಅಂಶಗಳ ಆಧಾರದ ಮೇಲೆ 1ರಿಂದ 5ನೇ ತರಗತಿಗಳ ಆರಂಭದ ಕುರಿತು ನಿರ್ಧರಿಸಲಾಗುತ್ತದೆ’ ಎಂದು ಸಚಿವರು ತಿಳಿಸಿದರು.

‘ಶಾಲೆ ಅವಧಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲು ಈಗಾಗಲೇ ಸಾರಿಗೆ ಸಚಿವರು, ಅಧಿಕಾರಿಗಳ ಜೊತೆ ಮಾತನಾಡಲಾಗಿದೆ. ಕೋವಿಡ್ ಪೂರ್ವದಲ್ಲಿ ಶಾಲೆ ಅವಧಿಗೆ ಬಸ್‌ಗಳು ಸಂಚರಿಸುತ್ತಿದ್ದವು. ಈಗ ಭೌತಿಕ ತರಗತಿಗಳು ಆರಂಭವಾಗಿರುವ ಕಾರಣ ಅದೇ ಸಮಯಕ್ಕೆ ಬಹುತೇಕ ಬಸ್ ಸಂಚರಿಸುತ್ತಿವೆ. ಹೊಸದಾಗಿ ಪಾಸ್ ಪಡೆಯುವವರೆಗೆ ಮಕ್ಕಳು ಬಸ್‌ಗಳಲ್ಲಿ ಸಂಚರಿಸಲು ಹಳೇ ಪಾಸ್ ಅಥವಾ ಶಾಲೆಯ ಐಡಿ ಕಾರ್ಡ್ ತೋರಿಸಿದರೆ ಸಾಕು’ ಎಂದು ಸಚಿವರು ಹೇಳಿದರು.

‘ಸಾಮಾಜಿಕ ಅಂತರ ಮತ್ತು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕಿರುವ ಕಾರಣ ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು ಸಾಧ್ಯವಾಗುವ, ವಾಹನ ವ್ಯವಸ್ಥೆ ಹೊಂದಿರುವ ಪಾಲಕರು ಸ್ವತಃ ತಾವೇ ಬಿಟ್ಟು ಬರಬಹುದು’ ಎಂದು ಸಚಿವರು ಸಲಹೆ ನೀಡಿದರು.

ವಿದ್ಯಾರ್ಥಿಗಳ ಜೊತೆ ಮಾತು:

ತರಗತಿಗಳಿಗೆ ತೆರಳಿದ ಸಚಿವರು, ಭೌತಿಕ ತರಗತಿಗಳ ಆರಂಭದ ಕುರಿತು ಮಕ್ಕಳ ಜೊತೆ ಮಾತನಾಡಿದರು. ತರಗತಿ ಆರಂಭ ಕುರಿತು ಅಭಿಪ್ರಾಯ ಕೇಳಿದಾಗ, ‘ಶಾಲೆಗೆ ಬರಲು ಖುಷಿಯಾಗುತ್ತಿದೆ. ಕೋವಿಡ್-19 ನಿಯಮಗಳನ್ನು ಪಾಲಿಸುತ್ತೇವೆ. ತರಗತಿಗಳು ಮುಂದುವರೆಯಬೇಕು. ಆನ್‌ಲೈನ್ ಕ್ಲಾಸ್‌ಗಿಂತ ಶಾಲೆಗೆ ಬರುವುದೇ ಬೆಸ್ಟ್. ಚೆನ್ನಾಗಿ ಅರ್ಥವಾಗುತ್ತದೆ’ ಎಂದು ಹೇಳಿದರು.

LEAVE A REPLY

Please enter your comment!
Please enter your name here