Home ಬೆಂಗಳೂರು ನಗರ Karnataka Revenue Minister Krishna Byregowda | ಬೆಂಗಳೂರು ನಗರ-ಗ್ರಾಮೀಣ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ...

Karnataka Revenue Minister Krishna Byregowda | ಬೆಂಗಳೂರು ನಗರ-ಗ್ರಾಮೀಣ ಜಿಲ್ಲಾಧಿಕಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ: ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಗಡುವು!

28
0
Karnataka Revenue Minister Krishna Byregowda's deadline to Bengaluru Urban, Bengaluru Rural District Collectors, Deadline issued for settlement of dispute cases
Karnataka Revenue Minister Krishna Byregowda's deadline to Bengaluru Urban, Bengaluru Rural District Collectors, Deadline issued for settlement of dispute cases
  • ಎಸಿ ನ್ಯಾಯಾಲಯದಲ್ಲಿ 16,440 ತಕರಾರು ಪ್ರಕರಣಗಳು ಬಾಕಿ
  • ಏಪ್ರಿಲ್ ಒಳಗಾಗಿ ಶೇ.50 ರಷ್ಟು ಪ್ರಕರಣಗಳ ಇತ್ಯರ್ಥಕ್ಕೆ ಗಡುವು

ಬೆಂಗಳೂರು:

ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ, ಜನರಿಗೆ ತುಸು ನೆಮ್ಮದಿ ನೀಡಿ ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ದಯಾನಂದ್, ಗ್ರಾಮೀಣ ಜಿಲ್ಲಾಧಿಕಾರಿಗಳಾದ ಶವಶಂಕರ್, ಪ್ರಾದೇಶಿಕ ಆಯುಕ್ತರಾದ ಆದಿತ್ಯ ಬಿಶ್ವಾಸ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್ ಹಾಗೂ ಎರಡೂ ಜಿಲ್ಲೆಗಳ ಉಪವಿಭಾಗಾಧಿಕಾರಿಗಳ ಜೊತೆಗೆ ಇಂದು ವಿಕಾಸಸೌಧದಲ್ಲಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಯಾವ ಪ್ರಮಾಣದಲ್ಲಿ ತಕರಾರು ಪ್ರಕರಣಗಳ ಇತ್ಯರ್ಥವಾಗುತ್ತಿದೆ ಎಂಬ ಕುರಿತು ಚರ್ಚೆ ನಡೆಸಲಾಯಿತು. ಈ ವೇಳೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು, “ಕಳೆದ ನಾಲ್ಕು ತಿಂಗಳಲ್ಲಿ ಬೆಂಗಳೂರು ವಿಭಾಗದ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಮೂರು ಬಾರಿ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗಿದೆ. ಅಲ್ಲದೆ, ಜಿಲ್ಲೆಗಳಿಗೂ ಭೇಟಿ ನೀಡಿ ಸಭೆ ನಡೆಸಲಾಗಿದೆ. ಈ ವೇಳೆ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಸೂಚಿಸಲಾಗಿದೆ. ಆದರೂ, ಈ ವಿಚಾರದಲ್ಲಿ ನಿರೀಕ್ಷಿತ ಪ್ರಗತಿ ಕಾಣದಿರುವುದು ಏಕೆ?” ಎಂದು ಪ್ರಶ್ನಿಸಿದರು.

ಬೆಂಗಳೂರು ನಗರ-ಗ್ರಾಮೀಣ ಭಾಗದಲ್ಲಿ ಮಾತ್ರ ಸುಮಾರು 18,000 ಕ್ಕೂ ಹೆಚ್ಚು ತಕರಾರು ಪ್ರಕರಣಗಳು ಬಾಕಿ ಇವೆ. ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಂತೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಒಟ್ಟಾರೆ ಪ್ರಕರಣಗಳ ಪೈಕಿ ಈ ನ್ಯಾಯಾಲಯಗಳಲ್ಲೇ 16,440 ಪ್ರಕರಣಗಳು ಬಾಕಿ ಇವೆ. ಇಷ್ಟೊಂದು ಪ್ರಕರಣಗಳು ಬಾಕಿ ಉಳಿಯಲು ಕಾರಣವೇನು? 5 ವರ್ಷಕ್ಕೂ ಹಿಂದಿನ ಪ್ರಕರಣಗಳೂ ಸಹ ಇತ್ಯರ್ಥವಾಗದಿದ್ದರೆ ಜನರ ಪಾಡು ಏನಾಗಬೇಕು? ಅವರೇನು ಪ್ರತಿದಿನ ಡಿಸಿ,ಎಸಿ ತಹಶೀಲ್ದಾರ್ ಕಚೇರಿಗಳಿಗೆ ಅಲೆಯುತ್ತಲೇ ಇರಬೇಕೆ? ಇದಕ್ಕೆ ಪರಿಹಾರವಾದರೂ ಏನು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಅಲ್ಲದೆ, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ ಜನರ ಸಮಸ್ಯೆಗಳನ್ನು ನಿವಾರಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ಪ್ರಕರಣಗಳನ್ನು ಶೀಘ್ರ ವಿಲೇಗೊಳಿಸಬೇಕು. ಅಗತ್ಯವಿದ್ದರೆ, ವಿಶೇಷ ಜಿಲ್ಲಾಧಿಕಾರಿಗಳಿಗೆ ತಕರಾರು ಪ್ರಕರಣಗಳ ಇತ್ಯರ್ಥದ ಜವಾಬ್ದಾರಿವಹಿಸಿ, ಮುಂದಿನ ಏಪ್ರಿಲ್ ತಿಂಗಳ ಒಳಗಾಗಿ ಶೇ.50 ರಷ್ಟು ಪ್ರಕರಣಗಳ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ಮುಂದಿನ ತಿಂಗಳ ಸಭೆಯಲ್ಲಿ ಸಕಾರಾತ್ಮಕ ಫಲಿತಾಂಶ ನೀಡಿ” ಎಂದು ತಾಕೀತು ಮಾಡಿದರು.

LEAVE A REPLY

Please enter your comment!
Please enter your name here