ಬೆಂಗಳೂರು:
ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಿ ನ್ಯಾಯ ಒದಗಿಸದೇ ಹೋದಲ್ಲಿ ಸಚಿವಾಲಯ ಬಂದ್ ಮಾಡುವುದಾಗಿ ಸಚಿವಾಲಯದ ನೌಕರರ ಸಂಘ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದೆ.
ನಿವೃತ್ತ ಸರ್ಕಾರಿ ನೌಕರರನ್ನು ಪುನಃ ಸಚಿವಾಲಯದ ಸೇವೆಗೆ ನೇಮಿಸಿಕೊಳ್ಳುವುದನ್ನು ನಿಲ್ಲಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳೂ ಸೇರಿದಂತೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಚಿವಾಲಯದ ನೌಕರರ ಸಂಘದ ಪದಾಧಿಕಾರಿಗಳು ಸಾಮೂಹಿಕ ಮೌನ ಪ್ರತಿಭಟನೆ ನಡೆಸಿದರು.
ಗಾಂಧಿ ಪ್ರತಿಮೆಯಿಂದ ವಿಧಾನಸೌಧದ ಕೆಂಗಲ್ ಪ್ರತಿಮೆ ಮಾರ್ಗವಾಗಿ ವಿಧಾನಸೌಧವನ್ನು ಪ್ರತಿಭಟಿಸುವ ಮೂಲಕ ಪ್ರತಿಭಟನಾಕಾರರು ಸುತ್ತುಹಾಕಿ ವಿಕಾಸಸೌಧದ ಮೆಟ್ಟಿಲು ಗಾಂಧಿ ಪ್ರತಿಮೆಬಳಿ ಜಮಾಯಿಸಿದರು.
ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸಚಿವಾಲಯದ ನೌಕರರನ್ನು ಪರಿಗಣಿಸದೇ ಇರುವುದೂ ಸೇರಿದಂತೆ ಸರ್ಕಾರದ ನಿರ್ಲಕ್ಷ್ಯತನವನ್ನು ಪ್ರತಿಭಟನಾಕಾರರು ತಮ್ಮ ಮೌನ ಪ್ರತಿಭಟನೆ ಮೂಲಕ ಸಾರ್ವಜನಿಕರಿಗೆ ಸರ್ಕಾರಕ್ಕೆ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಗಮನಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸರ್ಕಾರದ ಮುಖ್ಯಕಾರ್ಯದರ್ಶಿಗಳ ಪರ ಪ್ರತಿಭಟನಾಕಾರರ ಮನವಿಯನ್ನು ಪಡೆದರು.ಆಗ ನೌಕರರ ಸಂಘದ ಅಧ್ಯಕ್ಷ ಸೇರಿದಂತೆ ಇತರೆ ಪದಾಧಿಕಾರಿಗಳು ಏಳು ದಿನದೊಳಗೆ ಸಭೆ ನಡೆಸಿ ಸ್ಪಂದಿಸದೇ ಹೋದಲ್ಲಿ ಸಚಿವಾಲಯ ಬಂದ್ ಮಾಡಿ ಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ರವಾನಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳೂ ಸೇರಿದಂತೆ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.