IndiaSkills 2025-26 ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ; 29 ಪದಕಗಳ ಸಾಧನೆ
ಬೆಂಗಳೂರು: ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಮಾರ್ಟ್ನಲ್ಲಿ ನಡೆದ IndiaSkills 2025-26 ರಾಷ್ಟ್ರೀಯ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವು ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ರಾಜ್ಯವನ್ನು ಪ್ರತಿನಿಧಿಸಿದ 48 ಸ್ಪರ್ಧಿಗಳು 32 ಕೌಶಲ್ಯ ವಿಭಾಗಗಳಲ್ಲಿ ಭಾಗವಹಿಸಿ ಒಟ್ಟು 29 ಗೌರವಗಳನ್ನು ಪಡೆದುಕೊಂಡಿದ್ದು, ಒಡಿಶಾ ಮತ್ತು ತಮಿಳುನಾಡಿನ ನಂತರ ಕರ್ನಾಟಕ ಮೂರನೇ ಸ್ಥಾನಕ್ಕೇರಿದೆ. ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ, ಮೆಕಾಟ್ರಾನಿಕ್ಸ್, ಅಡಿಟಿವ್ ಮ್ಯಾನ್ಯುಫ್ಯಾಕ್ಚರಿಂಗ್, ಬೇಕರಿ ಮತ್ತು ವಿಸ್ವಲ್ ಮರ್ಚೆಂಡೈಸಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಕಂಡಿದೆ.
ಟೀಮ್ ಕರ್ನಾಟಕದ ಮಾರ್ಗದರ್ಶಕರಾದ ಕ್ಯಾಪ್ಟನ್ ಕೌಸ್ತವ್ ನಾಥ್ ಈ ಸಾಧನೆಯನ್ನು ಮುಂದಿನ ಯಶಸ್ಸಿನ ಮೆಟ್ಟಿಲು ಎಂದು ವಿವರಿಸಿ, ಇನ್ನಷ್ಟು ಉತ್ತಮ ಸಾಧನೆಗಾಗಿ ಪ್ರಯತ್ನಿಸಬೇಕೆಂದು ಹೇಳಿದರು. ರಾಜ್ಯದ ಯುವಕರ ಪ್ರತಿಭೆ ಮೆರೆದಿದ್ದರೂ, ಮುಂದಿನ ಬಾರಿ ಶ್ರೇಷ್ಠ ಸ್ಥಾನ ಪಡೆಯಲು ಹೆಚ್ಚಿನ ಪ್ರಯತ್ನ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕೌಶಲ್ಯಾಭಿವೃದ್ಧಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಹಿರಿಯ ಅಧಿಕಾರಿಗಳಾದ ಇ.ವಿ. ರಾಮಣ್ಣ ರೆಡ್ಡಿ, ಮನೋಜ್ ಕುಮಾರ್ ಮೀನಾ (ಐಎಎಸ್), ಎಚ್.ಎನ್. ಗೋಪಾಲ ಕೃಷ್ಣ ಮತ್ತು ಸುಮತಿ ಬಿ ಎಸ್ ಅವರಿಗೆ ಮಾರ್ಗದರ್ಶನ ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು.
ಕರ್ನಾಟಕ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ (KSDC) ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳು ಈ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು, ಒಟ್ಟು 29 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ 10 ಚಿನ್ನ, 6 ಬೆಳ್ಳಿ, 6 ಕಂಚು ಮತ್ತು 7 ಮೆಡಲಿಯನ್ ಫಾರ್ ಎಕ್ಸಲೆನ್ಸ್ ಸೇರಿವೆ.
ಈ ಪದಕ ವಿಜೇತರು ಮುಂದಿನ ಹಂತದಲ್ಲಿ ಶ್ರೇಷ್ಠ ತರಬೇತಿ ಪಡೆದು ಚೀನಾದ ಶಾಂಘೈನಲ್ಲಿ ನಡೆಯಲಿರುವ WorldSkills International ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಪಡೆಯಲಿದ್ದಾರೆ. ಇವರಿಗೆ ಅಗತ್ಯವಾದ ಮೂಲಸೌಕರ್ಯ ಮತ್ತು ಮಾರ್ಗದರ್ಶನವನ್ನು ರಾಜ್ಯ ಸರ್ಕಾರ ಒದಗಿಸುವುದಾಗಿ ಭರವಸೆ ನೀಡಿದೆ.
