ಬೆಂಗಳೂರು / ನ್ಯೂಯಾರ್ಕ್: ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ 24 ವರ್ಷದ ವಿದ್ಯಾರ್ಥಿ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿರುವ ಘಟನೆ ಆತಂಕ ಹುಟ್ಟಿಸಿದೆ.
ಸಾಕೇತ್ ಶ್ರೀನಿವಾಸಯ್ಯ ಅವರು ಕ್ಯಾಲಿಫೋರ್ನಿಯಾದ ಬೆರ್ಕ್ಲಿ ವಿಶ್ವವಿದ್ಯಾಲಯದಲ್ಲಿ MS ಪದವಿ ವ್ಯಾಸಂಗ ಮಾಡುತ್ತಿದ್ದರು. ಕಳೆದ ಎರಡು ದಿನಗಳಿಂದ ಅವರೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ತಿಳಿಸಿದ್ದಾರೆ.
ಫೆಬ್ರವರಿ 12ರಂದು ಟಿಲ್ಡೆನ್ ರೀಜನಲ್ ಪಾರ್ಕ್ನಲ್ಲಿರುವ ಕೆರೆಯ ಬಳಿ ಅವರು ಕೊನೆಯಾಗಿ ಕಾಣಿಸಿಕೊಂಡಿದ್ದರು ಎನ್ನಲಾಗಿದೆ. ಅದರ ನಂತರದಿಂದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಕುಟುಂಬದವರ ಮಾಹಿತಿ ಪ್ರಕಾರ, ಸಾಕೇತ್ ಅವರು ತಾಯಿಗೆ ದೂರವಾಣಿ ಕರೆ ಮಾಡಿದ್ದರು. ಆದರೆ ನಂತರ ತಾಯಿ ಕರೆಮಾಡಿದಾಗ ಪ್ರತಿಕ್ರಿಯೆ ಸಿಕ್ಕಿಲ್ಲ. ಮಗನ ಸಂಪರ್ಕ ಇಲ್ಲದಿರುವುದರಿಂದ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ದಿ ಬರ್ಕ್ಲಿ ಸ್ಕ್ಯಾನರ್ ಸುದ್ದಿ ಪೋರ್ಟಲ್ ವರದಿ ಪ್ರಕಾರ, ಪಾರ್ಕ್ ಹಿಲ್ಸ್ ನೆರೆಹೊರೆಯ ಮನೆ ಬಾಗಿಲಿನಲ್ಲಿ ಅವರ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ ಪಾಸ್ಪೋರ್ಟ್ ಮತ್ತು ಲ್ಯಾಪ್ಟಾಪ್ ಇದ್ದವು. ಈ ಘಟನೆಗೆ ಸಂಬಂಧಿಸಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಗಂಭೀರ ಕಳವಳ ವ್ಯಕ್ತಪಡಿಸಿದೆ.
ಸ್ಥಳೀಯ ಅಧಿಕಾರಿಗಳು ಹುಡುಕಾಟ ಕಾರ್ಯಾಚರಣೆ ಮುಂದುವರೆಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.
