
ಬೆಂಗಳೂರು: ಭಾರತದ ಡಿಜಿಟಲ್ ಭವಿಷ್ಯವನ್ನು ರೂಪಿಸಲು ಕರ್ನಾಟಕ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಬೆಂಗಳೂರಿನಲ್ಲಿ ‘ಟೆಲಿಕಾಂ ಸೆಂಟರ್ ಆಫ್ ಎಕ್ಸಲೆನ್ಸ್’ (Telecom Centre of Excellence – TCOE) ಸ್ಥಾಪನೆಯ ಮೂಲಕ ಮುಂದಿನ ತಲೆಮಾರಿನ ತಂತ್ರಜ್ಞಾನ, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ದಾರಿ ತೆರೆಯಲಾಗಿದೆ.
ಡಾ. ಶರಣಪ್ರಕಾಶ್ ಆರ್. ಪಾಟೀಲ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವೋಪಾಯ ಸಚಿವರು, ಗುರುವಾರ ಈ ಕೇಂದ್ರವನ್ನು ಉದ್ಘಾಟಿಸಿದರು. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಹಾಗೂ ವಿಶ್ವೇಶ್ವರಯ್ಯ ರಿಸರ್ಚ್ ಅಂಡ್ ಇನವೇಶನ್ ಫೌಂಡೇಶನ್ (VRIF) ನಡುವಿನ ಸಹಯೋಗದ ಭಾಗವಾಗಿ ಸ್ಥಾಪನೆಯಾಗಿದೆ.
ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, VTU ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಉಪಸ್ಥಿತರಿದ್ದರು.
“ಇದು ರಾಷ್ಟ್ರೀಯ ಮಟ್ಟದ ಕೇಂದ್ರವಾಗಿದ್ದು, ಮುಂದಿನ ತಲೆಮಾರಿನ ಸಂಶೋಧನೆ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಸಂಬಂಧಿತ ಹೊಸ ಹೊಸ ಆವಿಷ್ಕಾರಗಳಿಗೆ ಪೂರಕವಾಗಿದೆ,” ಎಂದು ಡಾ. ಪಾಟೀಲ ಹೇಳಿದರು.
ಈ ಕೇಂದ್ರವು 5G/6G ಸಂಪರ್ಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI), ಮೆಷಿನ್ ಲರ್ನಿಂಗ್ (ML), ಆಗ್ಮೆಂಟೆಡ್/ವರ್ಚುಯಲ್ ರಿಯಾಲಿಟಿ (AR/VR), ಕ್ವಾಂಟಮ್ ಕಂಪ್ಯೂಟಿಂಗ್, ಆರೋಗ್ಯ ತಂತ್ರಜ್ಞಾನ ಮುಂತಾದ ಹಲವು ನವೀನ ಕ್ಷೇತ್ರಗಳ ಮೇಲೆ ಕೇಂದ್ರಿತವಾಗಿರಲಿದೆ.
VTU ಬೆಂಗಳೂರು ಪ್ರಾದೇಶಿಕ ಕಚೇರಿಯಿಂದ ಕಾರ್ಯನಿರ್ವಹಿಸಲಿರುವ ಈ TCOE ಕೇಂದ್ರವು ರಾಜ್ಯದಾದ್ಯಂತ 30ಕ್ಕೂ ಹೆಚ್ಚು ಅಂಗ ಸಂಸ್ಥೆಗಳ (Spoke Institutions) ಜಾಲವನ್ನು ಹೊಂದಿದ್ದು, ಸ್ಥಳೀಯವಾಗಿ ಸಂಶೋಧನೆ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.
ಮುಖ್ಯ ವೈಶಿಷ್ಟ್ಯಗಳು:
- ಸ್ಟಾರ್ಟ್ಅಪ್ ಇನ್ಕ್ಯುಬೇಶನ್ ಘಟಕಗಳು
- ಕ್ಷೇತ್ರವಾರು ಕೌಶಲ್ಯಾಭಿವೃದ್ಧಿ ಕೇಂದ್ರಗಳು
- Televerge, Tejas Networks, VVDN Technologies, Keysight Technologies ಮತ್ತು Telecom Sector Skill Council (TSSC) ಸೇರಿದಂತೆ ಪ್ರಮುಖ ಕಂಪನಿಗಳೊಂದಿಗೆ ಕೈಜೋಡಿಕೆ
VTUಯ 228ಕ್ಕೂ ಹೆಚ್ಚು ಸಂಬಂಧಿತ ಕಾಲೇಜುಗಳು, 4 ಲಕ್ಷ ವಿದ್ಯಾರ್ಥಿಗಳು, 20 ಸಾವಿರದ ಮೇಲೆ ಅಧ್ಯಾಪಕರು ಮತ್ತು ಸಂಶೋಧಕರೊಂದಿಗೆ TCOE ಕೇಂದ್ರವು ಉದ್ಯಮ-ಶೈಕ್ಷಣಿಕ ಭಿನ್ನತೆಯನ್ನು ಕಡಿಮೆ ಮಾಡುವ, ಅನ್ವಯ ಸಂಶೋಧನೆಗೆ ಉತ್ತೇಜನ ನೀಡುವ, ಹಾಗೂ ಭವಿಷ್ಯದ ತಂತ್ರಜ್ಞಾನ ಉದ್ಯೋಗಗಳಿಗೆ ತಯಾರಾಗುವ ಪ್ರಮುಖ ವೇದಿಕೆಯಾಗಿ ರೂಪುಗೊಳ್ಳಲಿದೆ.
“ವಿದ್ಯಾ ಮತ್ತು ಉದ್ಯಮದ ಸಂಗಮದಿಂದಲೇ ಆತ್ಮನಿರ್ಭರ ಭಾರತ ಮತ್ತು ನವೋದ್ಯಮಪೂರ್ಣ ಭವಿಷ್ಯ ಸಾಧ್ಯ. TCOE ಇದರ ದಿಕ್ಕಿನಲ್ಲಿ ಮಹತ್ತರ ಪಾತ್ರ ವಹಿಸಲಿದೆ,” ಎಂದು ಸಚಿವ ಡಾ. ಪಾಟೀಲ ಅಭಿಪ್ರಾಯಪಟ್ಟರು.