Home ಬೆಂಗಳೂರು ನಗರ ರಾಜ್ಯದಲ್ಲಿ 10 ಲಕ್ಷ ಎನ್‌ಎಸ್ಎಸ್ ಸ್ವಯಂಸೇವಕರ ಗುರಿ: ಅಶ್ವತ್ಥನಾರಾಯಣ

ರಾಜ್ಯದಲ್ಲಿ 10 ಲಕ್ಷ ಎನ್‌ಎಸ್ಎಸ್ ಸ್ವಯಂಸೇವಕರ ಗುರಿ: ಅಶ್ವತ್ಥನಾರಾಯಣ

28
0
Karnataka Targets of 10 lakh NSS volunteers in state

ಉನ್ನತ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಕುಲಪತಿಗಳ ಜೊತೆ ಸಮಾಲೋಚನೆ

ಬೆಂಗಳೂರು:

ರಾಜ್ಯದ ಕಾಲೇಜುಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (ಎನ್ಎಸ್ಎಸ್) ಘಟಕಗಳ ಸಂಖ್ಯೆಯನ್ನು ಹೆಚ್ಚಿಸಿ, ಆ ಮೂಲಕ ಸ್ವಯಂ ಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಏರಿಸುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಬುಧವಾರ ವಿಕಾಸಸೌಧದಲ್ಲಿ ಚರ್ಚೆ ನಡೆಸಿದರು.

ಇಬ್ಬರೂ ಸಚಿವರು ವಿಶ್ವವಿದ್ಯಾಲಯಗಳ ಕುಲಪತಿಗಳು ಹಾಗೂ ಎನ್.ಎಸ್‌ಎಸ್ ಸಂಯೋಜಕರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಸಚಿವರಿಬ್ಬರು ಎನ್‌ಎಸ್ಎಸ್ ಸ್ವಯಂ ಸೇವಕರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರಾಜ್ಯದಲ್ಲಿ 2,78,200 ಸಾವಿರ ಸ್ವಯಂ ಸೇವಕರನ್ನು ನೋಂದಣಿ ಮಾಡಿಸುವ ಗುರಿ ನೀಡಲಾಗಿತ್ತು. ಇದನ್ನು ಮೀರಿ, ಈಗಾಗಲೇ ರಾಜ್ಯದಲ್ಲಿ 5 ಲಕ್ಷ ನೋಂದಾಯಿತ ಸ್ವಯಂ ಸೇವಕರು ಇದ್ದಾರೆ. ಹೊಸ ಶಿಕ್ಷಣ ನೀತಿಯಲ್ಲಿ ಎನ್‌ಎಸ್ಎಸ್ ಪಠ್ಯದ ಭಾಗವಾಗಿರುವುದರಿಂದ, ಪ್ರತಿಯೊಂದು ಕಾಲೇಜೂ ಇದಕ್ಕೆ ಒಳಪಡುತ್ತದೆ ಎಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.

ರಾಜ್ಯದಲ್ಲಿ ಎನ್.ಎಸ್.ಎಸ್. ಸ್ವಯಂ ಸೇವಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶ್ರಮದಾನದ ಜೊತೆಗೆ ಆರೋಗ್ಯ ಅರಿವು, ಸರ್ಕಾರದ ಹಲವು ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಎನ್.ಎಸ್.ಎಸ್. ಸ್ವಯಂ ಸೇವಕರ ಸಂಖ್ಯೆ ಹೆಚ್ಚಿಸುವುದರಿಂದ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಕಾರಿಯಾಗಲಿದೆ. 10 ಲಕ್ಷ ಎನ್.ಎಸ್.ಎಸ್. ಸ್ವಯಂ ಸೇವಕರು ನೋಂದಣಿಯಾದರೆ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸ್ವಯಂ ಸೇವಕರನ್ನು ಹೊಂದಿದ ರಾಜ್ಯವಾಗಲಿದೆ ಎಂದರು.

ಶಿಕ್ಷಣ ಕ್ರಾಂತಿಯಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾತ್ರ ವಹಿಸಲಿದೆ. ಎಲ್ಲಾ ಕಾಲೇಜುಗಳು ಇದರಲ್ಲಿ ಪಾಲ್ಗೊಳ್ಳಬೇಕು. ಬೋಧಕರು ಹಾಗೂ ವಿದ್ಯಾರ್ಥಿಗಳು ಕೇವಲ ಅಂಕವಷ್ಟೇ ಮುಖ್ಯ ಎಂದು ಸೀಮಿತವಾಗಿ ಯೋಚಿಸದೆ ಸಾಮಾಜಿಕ ಸೇವೆಯಲ್ಲೂ ತೊಡಗಿಕೊಳ್ಳಬೇಕು. ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ನೋಂದಣಿ ಮಾಡಿಕೊಳ್ಳುವ ಜೊತೆಗೆ ತಮ್ಮ ಪ್ರಾಜೆಕ್ಟ್ಗಳನ್ನು ಎನ್‌.ಎಸ್.ಎಸ್. ಮುಖಾಂತರ ಮಾಡಲು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ‌ ರಜನೀಶ್, ಉನ್ನತ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here