ಬೆಂಗಳೂರು, ಮಾರ್ಚ್ 11: ಕರ್ನಾಟಕದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (MSME) ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ ಹೊಸ ಎಂಎಸ್ಎಂಇ ನೀತಿಯಲ್ಲಿ ಎಐ (Artificial Intelligence) ಮತ್ತು ಡಿಜಿಟಲ್ ಮಾರ್ಗಸೂಚಿಗಳನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಎಂಎಸ್ಎಂಇ, ಸಕ್ಕರೆ ಮತ್ತು ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಕಾಸಿಯಾ ಭವನದಲ್ಲಿ ನಡೆದ ರಾಜ್ಯಮಟ್ಟದ ಪಾಲುದಾರರ ಪೂರ್ವಭಾವಿ ಸಮಾಲೋಚನಾ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಒಟ್ಟು ಕೈಗಾರಿಕಾ ಘಟಕಗಳಲ್ಲಿ ಸುಮಾರು 97 ಶೇಕಡಾ ಘಟಕಗಳು ಎಂಎಸ್ಎಂಇಗಳಾಗಿದ್ದು, ರಾಜ್ಯದಲ್ಲಿ ಅತಿಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಿರುವ ಪ್ರಮುಖ ಕ್ಷೇತ್ರವೂ ಇದೇ ಆಗಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆ ಸರ್ಕಾರ ಈ ವಲಯದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದು ಹೇಳಿದರು.
ಈ ಕಾರ್ಯಾಗಾರವು ನೀತಿ ರೂಪಣೆಯ ಮೊದಲ ಹಂತವಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಭಾಗೀಯ ಮಟ್ಟದ ಸಮಾಲೋಚನಾ ಕಾರ್ಯಾಗಾರಗಳನ್ನು ಆಯೋಜಿಸಿ ಉದ್ಯಮಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು.
ಹೊಸ ನೀತಿಯಲ್ಲಿ ತಂತ್ರಜ್ಞಾನ ಮತ್ತು ನವೀನತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ರಾಜ್ಯದ ಎಂಎಸ್ಎಂಇಗಳನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಸಲು ವಿಶೇಷ ಎಐ ಮತ್ತು ಡಿಜಿಟಲ್ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಉದ್ಯಮಿಗಳು ಹಾಗೂ ಉದ್ಯಮ ಸಂಸ್ಥೆಗಳು ತಮ್ಮ ಸಲಹೆಗಳನ್ನು ನೀಡಬೇಕು. ಉತ್ತಮ ನೀತಿ ರೂಪಿಸಲು ಇಲಾಖೆಯು ಎಲ್ಲಾ ಸಲಹೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಲು ಸಿದ್ಧವಾಗಿದೆ ಎಂದು ರೋಹಿಣಿ ಸಿಂಧೂರಿ ಕರೆ ನೀಡಿದರು.
ಕಾರ್ಯಾಗಾರದಲ್ಲಿ ಕಾಸಿಯಾ ಅಧ್ಯಕ್ಷ ಬಿ.ಆರ್. ಗಣೇಶ್ ರಾವ್, ಎಂಎಸ್ಎಂಇ ಇಲಾಖೆಯ ನಿರ್ದೇಶಕ ಡಾ. ಸತೀಶ್ ಬಿ.ಸಿ., ಪೀಣ್ಯ ಕೈಗಾರಿಕಾ ಪ್ರದೇಶದ ಅಧ್ಯಕ್ಷ ಡಿ.ಪಿ. ದಾನಪ್ಪ, ಅವೇಕ್ ಅಧ್ಯಕ್ಷೆ ಭುವನೇಶ್ವರಿ ಸೇರಿದಂತೆ ನೂರಾರು ಉದ್ಯಮಿಗಳು ಭಾಗವಹಿಸಿದ್ದರು.
