Home ಶಿಕ್ಷಣ ರಾಜ್ಯದಲ್ಲಿ ಸಂಶೋಧನೆ & ಅಭಿವೃದ್ಧಿ ನೀತಿ ಹಾಗೂ ಡಿಜಿಟಲೀಕರಣ ನೀತಿ ಜಾರಿ: ಮುಖ್ಯಮಂತ್ರಿ ಘೋಷಣೆ

ರಾಜ್ಯದಲ್ಲಿ ಸಂಶೋಧನೆ & ಅಭಿವೃದ್ಧಿ ನೀತಿ ಹಾಗೂ ಡಿಜಿಟಲೀಕರಣ ನೀತಿ ಜಾರಿ: ಮುಖ್ಯಮಂತ್ರಿ ಘೋಷಣೆ

84
0
Karnataka to Implement Research & Development Policy and Digitalization Policy says Chief Minister

ಬೆಂಗಳೂರು:

ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು ಶಿಕ್ಷಣ ಸಂಸ್ಥೆಗಳು, ಸಂಶೊಧನೆ ಮತ್ತು ಅಭಿವೃದ್ಧಿ ಸಂಸ್ಥೇಗಳು ಹಾಗೂ ಉದ್ಯಮಗಳನ್ನು ಬೆಸೆಯುವ ಸಂಶೋಧನೆ ಮತ್ತು ಅಭಿವೃದ್ಧಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು.

ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನಕ್ಕೆ ಚಾಲನೆ, 2021-22ನೇ ಸಾಲಿನ ನ್ನತ ಶಿಕ್ಷಣ ಪ್ರವೇಶಾತಿಗೆ ಚಾಲನೆ, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆಗೆ ಚಾಲನೆ, ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ ಹಾಗೂ ಉನ್ನತ ಶಿಕ್ಷಣ ನೀತಿ ರೂಪಿಸಿದ ರೂವಾರಿಗಳಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ. ಇದಕ್ಕೆ ಕರ್ನಾಟಕಕ್ಕಿಂತ ಉತ್ತಮ ತಾಣ ಇನ್ನೊಂದಿಲ್ಲ. ದೇಶದಲ್ಲಿ ಅತಿ ಹೆಚ್ಚು ಅಂತರರಾಷ್ಟ್ರೀಯ ಮಾನ್ಯತೆ ಪಡೆದ 180 ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ. ಶಿಕ್ಷಣ ಸಂಸ್ಥೇಗಳು ಇಂತಹ ಸಂಶೋಧನಾ ಸಂಸ್ಥೆಗಳು ಹಾಗೂ ಉದ್ಯಮದೊಂದಿಗೆ ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಉದ್ದೇಶದಿಂದ ಈ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

Karnataka to Implement Research & Development Policy and Digitalization Policy says Chief Minister

ವಿದ್ಯಾರ್ಥಿಗಳಿಗೆ ಇಂದು ನಿಜವಾದ ಸ್ವಾತಂತ್ರ್ಯ ದಿನ. ಇಂದು ಶಾಲೆ ಪ್ರಾರಂಭವಾಗಿದ್ದು, ಮಕ್ಕಳಿಗೆ ಕೋವಿಡ್ ನಿಂದ ಸ್ವಾತಂತ್ರ್ಯ ದೊರೆತಿದೆ. ಅಂತೆಯೇ ಈ ಸಮಾರಂಭದಲ್ಲಿ ಜಡ್ಡುಗಟ್ಟಿದ ವ್ಯವಸ್ಥೆ ಮತ್ತು ನೀತಿಯಿಂದ ಉನ್ನತ ಶಿಕ್ಷಣಕ್ಕೆ ಮುಕ್ತಿ ದೊರೆತಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಇದು ಕೇವಲ ಇಂದಿಗಲ್ಲ. ಮುಂದಿನ ಜನಾಂಗಕ್ಕೆ ಸ್ವಾತಂತ್ರ್ಯದ ದಿನ. ಇದು ಯಶಸ್ವಿಯಾದರೆ, ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಮಾಡುವಂತೆ ಆಗಸ್ಟ್ 23 ರಂದು ಶಿಕ್ಷಣ ದಿನ ಆಚರಿಸಬೇಕಾಗುವುದು. ಇದನ್ನು ಯಶಸ್ವಿಗೊಳಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಅತ್ಯುತ್ತಮ ವಿಚಾರಗಳು ಅನುಷ್ಠಾನಕ್ಕೆ ಬಂದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಪ್ರಧಾನ ಮಂತ್ರಿ ಮೋದಿಜಿ ಅವರು ದೇಶದ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ದೂರದೃಷ್ಟಿಯಿಂದ ಜಾರಿಗೆ ತಂದಿರುವ ನೀತಿ, ರಾಷ್ಟ್ರೀಯ ಶಿಕ್ಷಣ ನೀತಿ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಯನ್ನು ಎಲ್ಲ ಬಂಧ, ಚೌಕಟ್ಟುಗಳಿಂದ ಮುಕ್ತಗೊಳಿಸಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುತ್ತದೆ. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ವಿಭಜನೆ ಇರಬಾರದು. ಶಿಕ್ಷಣ ವ್ಯವಸ್ಥೆಯ ಬಂಧಗಳಿಂದಾಗಿ, ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಪೂರ್ಣಪ್ರಮಾಣದಲ್ಲಿ ಬೆಳೆಸಲು ಸಾಧ್ಯವಾಗುತ್ತಿಲ್ಲ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಸ್ವಾತಂತ್ರ್ಯ ಮಾತ್ರವಲ್ಲ,ಅವರ ಕ್ರಿಯಾಶೀಲತೆಯ ಬೆಳವಣಿಗೆಯ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

Karnataka to Implement Research & Development Policy and Digitalization Policy says Chief Minister

ವಿದ್ಯಾರ್ಥಿ ಪಡೆದ ಶಿಕ್ಷಣವನ್ನು ಸಮಾಜ ಗುರುತಿಸಬೇಕೆನ್ನುವ ದೃಷ್ಟಿಯಿಂದ ಸರ್ಕಾರ ಗುರುತಿಸುತ್ತದೆ ಹಾಗೂ ಪ್ರತಿ ವರ್ಷದ ಶಿಕ್ಷಣ ಪೂರ್ಣಗೊಳಿಸಿದ್ದಕ್ಕೆ ಪ್ರಮಾಣ ಪತ್ರ ನೀಡುತ್ತದೆ. ವಿದ್ಯಾರ್ಥಿಗಳಿಗೆ ಆಯ್ಕೆ ಮತ್ತು ಅವಕಾಶಗಳನ್ನು ಒದಗಿಸುವ ಶಿಕ್ಷಣ ನೀತಿ ಇದಾಗಿದೆ. ಬದಲಾವಣೆ ಸ್ವಲ್ಪ ಕಷ್ಟಕರ. ಆದ್ದರಿಂದ ಶಿಕ್ಷಣ ನೀತಿಯ ಪರಿಕಲ್ಪನೆಯು ಜನರ ಮನದಾಳದಲ್ಲಿ ಘನೀಭವಿಸುವಂತೆ ಮಾಡಬೇಕು. ಈ ಸವಾಲಿನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಈ ನೀತಿಯ ಅನುಷ್ಠಾನ ಯಶಸ್ವಿಯಾಗಬೇಕಾದರೆ, ಸಮಾಜದಲ್ಲಿನ ಬದಲಾವಣೆಗಳನ್ನು ಸಹ ಅರಿತುಕೊಳ್ಳಬೇಕಾಗುತ್ತದೆ. ಬದಲಾವಣೆಗೆ ನಾವು ಹೊಂದಿಕೊಳ್ಳಬೇಕಾಗಿದೆ. ಮೊದಲು ಮೌಲ್ಯಾಧಾರಿತ ಜ್ಞಾನವಿತ್ತು, ನಂತರ ವಿಜ್ಞಾನ ಬಂತು. ಅನಂತರ ತಂತ್ರಜ್ಞಾನ ಬಂತು. ಇಂದು ನಾವು ತಂತ್ರಾಂಶ ಜ್ಞಾನದ ಯುಗದಲ್ಲಿದ್ದೇವೆ. ಈ ತಂತ್ರಾಂಶ ಜ್ಞಾನ ಮಕ್ಕಳಿಗೆ ತಲುಪಿಸಬೇಕು.

ಡಿಜಿಟಲೀಕರಣ ನೀತಿ ಜಾರಿಗೆ

ಶಿಕ್ಷಣ ನೀತಿಯ ಯಶಸ್ವಿ ಅನುಷ್ಠಾನದಲ್ಲಿ ಡಿಜಿಟಲೀಕರಣ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ಆಡಳಿತಕ್ಕೆ ಮಾತ್ರವಲ್ಲ, ವ್ಯವಹಾರ, ಶಿಕ್ಷಣಕ್ಕೂ ಡಿಜಿಟಲೀಕರಣ ಅತಿ ಮುಖ್ಯ. ಈ ಹಿನ್ನೆಲೆಯಲ್ಲಿ ಸಂಪೂರ್ಣ ನೆಟ್ ವರ್ಕಿಂಗ್ ಪ್ರತಿ ಗ್ರಾಮಕ್ಕೆ ತಲುಪುವಂತಾಗಲು ನೂತನ ಡಿಜಿಟಲೀಕರಣ ನೀತಿಯನ್ನು ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ತಜ್ಞರ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.

ಇದರೊಂದಿಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಕಲಿಕೆಗೆ ಅನುಕೂಲವಾಗುವಂತೆ ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐ ಪ್ಯಾಡ್ ನೀಡಲಾಗುವುದು ಎಂದು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ- ಕಲಬುರಗಿಯಲ್ಲಿ ಚಾಲನೆ

ಅಂತೆಯೇ ರಾಜ್ಯದ ಶಿಕ್ಷಣ ನೀತಿ ಅನುಷ್ಠಾನ ಕುರಿತ ಟಾಸ್ಕ್ ಫೋರ್ಸ್ ಸಲಹೆಯಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿಯನ್ನು ಸ್ಥಾಪಿಸಲಾಗುವುದು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವಲಯದಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಉದ್ಯೋಗ ಅವಕಾಶ ಹೆಚ್ಚಾಗಿ ಕಲ್ಪಿಸುವ ಗುರಿ ಇರುವುದರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಉದ್ಯೋಗ ಮಾರ್ಗದರ್ಶನ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕೀಳರಿಮೆ ತೊಡೆಯುವಂತೆ ಸಲಹೆ ನೀಡಿದರು.

ನೂತನ ಶಿಕ್ಷಣ ನೀತಿಯು ಎಲ್ಲ ವಿದ್ಯಾರ್ಥಿಗಳಿಗೆ ಆಯ್ಕೆ, ಅವಕಾಶ, ಆತ್ಮವಿಶ್ವಾಸ, ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿಗೆ ಒತ್ತು ನೀಡುತ್ತದೆ. ಇಷ್ಟೆಲ್ಲ ಹೊಸತನ್ನು ನೀಡುವ ಶಿಕ್ಷಣ ನೀತಿಯು ಮನುಕುಲದ ಉಜ್ವಲ ಭವಿಷ್ಯವನ್ನು ಬರೆಯುವಂತಾಗಬೇಕು. ವಿದ್ಯಾರ್ಥಿಗಳು ಅಂತಹ ಅತ್ಯುತ್ಕೃಷ್ಟ ಸಾಧನೆ ಮಾಡುವಂತಾಗಬೇಕು ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಇತರ ರಾಜ್ಯಗಳಿಗೆ ಮಾದರಿಯಾಗಬೇಕು ಎಂದು ಆಶಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಎಲ್ಲರಿಗೂ ಕೈಗೆಟಕುವ, ಸಮಾನತೆಯನ್ನು ತರುವ, ಗುಣಮಟ್ಟದ ಶಿಕ್ಷಣ ನೀಡುವ ಪ್ರಕ್ರಿಯೆಯಾಗಬೇಕು ಎಂದು ನುಡಿದರು.

ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಮಾತನಾಡಿ, ಸಬಲೀಕರಣ, ಜ್ಞಾನದ ಮೂಲಕ ಬದುಕು ರೂಪಿಸಲು ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. 36 ವರ್ಷದ ನಂತರ ಜಾರಿಗೊಳಿಸಲಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಸ್ತುತ ಶಿಕ್ಷಣ ನೀತಿಯಲ್ಲಿನ ಹಲವು ನ್ಯೂನ್ಯತೆಗಳನ್ನು ಸರಿಪಡಿಸಿ, ಶಿಕ್ಷಣ ಮತ್ತು ಕೌಶಲ್ಯವನ್ನು ಒಗ್ಗೂಡಿಸಿದೆ; ಗುಣಮಟ್ಟ ಮತ್ತು ಪರಿಣತಿಯನ್ನು ಒಗ್ಗೂಡಿಸಿದೆ ಎಂದು ವಿವರಿಸಿದರು.

ದೇಶದ ಅತ್ಯುತ್ತಮ ನಾಯಕರು, ಉದ್ಯೋಗದಾತರು ಹಾಗೂ ಉತ್ಕೃಷ್ಟ ಉದ್ಯೋಗಿಗಳನ್ನು ಸೃಷ್ಟಿಸುವ ಮಹದಾಶಯ ರಾಷ್ಟ್ರೀಯ ಶಿಕ್ಷಣ ನೀತಿಯದ್ದಾಗಿದೆ. ಶಿಕ್ಷಣದಿಂದ ಮಾತ್ರ ಸಮಾನತೆ ಸಾಧಿಸಲು ಸಾಧ್ಯ. ಇದಕ್ಕೆ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ತಂತ್ರಜ್ಞಾನದ ಬಳಕೆಯನ್ನೂ ಮಾಡುತ್ತಿದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಸಮರ್ಪಕ ಅನುಷ್ಠಾನಕ್ಕೆ ಶಿಕ್ಷಕರು, ವಿಶ್ವವಿದ್ಯಾಲಯಗಳು ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಕುರಿತ ಕಾರ್ಯಪಡೆಯು ನೀಡಿರುವ ಸಲಹೆಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ನಿರೂಪಣಾ ಸಮಿತಿಯ ಅಧ್ಯಕ್ಷ ಡಾ. ಕಸ್ತೂರಿ ರಂಗನ್ ಹಾಗೂ ತಂಡದ ಸದಸ್ಯರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಕಸ್ತೂರಿ ರಂಗನ್ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಅತ್ಯಂತ ಸವಾಲಿನ ಕೆಲಸ. ಪರಿಣತರ ಮಾರ್ಗದರ್ಶನದೊಂದಿಗೆ ಇಂತಹ ಸವಾಲುಗಳನ್ನು ಕ್ಷೀಣಗೊಳಿಸಿ ಮುಂದುವರೆಯುವಂತೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ. ತಿಮ್ಮೇಗೌಡ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here