ಬೆಂಗಳೂರು: ಕರ್ನಾಟಕ ಸರ್ಕಾರವು ಜಾಗತಿಕ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಡಿಪ್ಲೊಮಸಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಂಸ್ಕೃತಿಕ ರಾಜತಾಂತ್ರಿಕ (ಡಿಪ್ಲೊಮಸಿ) ಕೋಶ—KSCD ಸಮಾವೇಶವನ್ನು ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಆಯೋಜಿಸಿತು. ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ನೂತನ ಪ್ರಯತ್ನಕ್ಕೆ ಈ ಸಮಾವೇಶ “ಹೊಸ ಮೈಲುಗಲ್ಲು” ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗಿ ರೂಪಿಸುವ ರಾಜ್ಯದ ದೃಷ್ಟಿಕೋನಕ್ಕೆ KSCD ಮಹತ್ವದ ವೇದಿಕೆಯಾಗಲಿದೆ ಎಂದು ಹೇಳಿದರು.
“ಪ್ರವಾಸೋದ್ಯಮವು ಸಂತೋಷ, ತೃಪ್ತಿ ಹಾಗೂ ಜ್ಞಾನೋದಯದ ಅನ್ವೇಷಣೆ. ಕರ್ನಾಟಕಕ್ಕೆ ಬರುವವರು ನಮ್ಮ ಆಧ್ಯಾತ್ಮಿಕ ಪರಂಪರೆಯಿಂದ ಶಾಂತಿಯನ್ನು, ನಮ್ಮ ಹಬ್ಬಗಳಿಂದ ಸಂತೋಷವನ್ನು ಮತ್ತು ನಮ್ಮ ಇತಿಹಾಸದಿಂದ ಜ್ಞಾನೋದಯವನ್ನು ಅನುಭವಿಸಬೇಕು”, ಎಂದು ಸಚಿವ ಪಾಟೀಲ್ ಹೇಳಿದರು.
ಜಾಗತಿಕ ತೊಡಗಿಸಿಕೊಳ್ಳುವಿಕೆಗೆ ಹೊಸ ಚೌಕಟ್ಟು
ಸಾಂಸ್ಕೃತಿಕ ಪಾಲುದಾರಿಕೆ, ಪ್ರವಾಸೋದ್ಯಮ ಪ್ರಚಾರ, ಜ್ಞಾನ ವಿನಿಮಯ ಮತ್ತು ವ್ಯಾಪಾರ ಸುಗಮೀಕರಣದ ಮೂಲಕ ಕರ್ನಾಟಕ ಮತ್ತು ವಿಶ್ವದ ರಾಜತಾಂತ್ರಿಕ ಧೂತಾವಾಸ ಕಚೇರಿಗಳ ನಡುವೆ ಸಹಭಾಗಿತ್ವ ಬಲಪಡಿಸಲು KSCD ಅನ್ನು ಸರ್ಕಾರ ಕಾರ್ಯತಂತ್ರದ ವೇದಿಕೆಯಾಗಿ ರೂಪಿಸಿದೆ.
ಈ ಚೌಕಟ್ಟಿನ ಮುಖ್ಯ ಉದ್ದೇಶಗಳು:
- ಕರ್ನಾಟಕದ ಸಾಂಸ್ಕೃತಿಕ ಡಿಪ್ಲೊಮಸಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವುದು
- ಪ್ರವಾಸೋದ್ಯಮದ ಮೂಲಕ ಆರ್ಥಿಕ ಅಭಿವೃದ್ಧಿ ಹೆಚ್ಚಿಸುವುದು
- Karnataka Tourism Policy 2024–29ರಡಿ ಜಾಗತಿಕ ಸ್ಥಾನೀಕರಣ ಮತ್ತು ಸುರಕ್ಷತೆ ಬಲಪಡಿಸುವುದು
- ಜಿಲ್ಲಾವಾರಿಯಾದ ಪ್ರವಾಸೋದ್ಯಮ ಸಮೃದ್ಧಿ
ಕರ್ನಾಟಕದ ಪರಂಪರೆಯ ಜಾಗತಿಕ ಮೌಲ್ಯ
ಬಸವಣ್ಣ ಮತ್ತು ಕುವೆಂಪು ಅವರ ಮಾನವೀಯ ಮೌಲ್ಯಗಳನ್ನು ನೆನಪಿಸಿಕೊಂಡ ಸಚಿವರು, “ಕರ್ನಾಟಕವು ಜ್ಞಾನ, ಸಂವಾದ ಮತ್ತು ಮಾನವೀಯತೆಯ ತವರೂರು” ಎಂದು ಹೇಳಿದರು.
ಹಂಪಿ, ಐಹೋಳೆ, ಕರಾವಳಿ ಪರಂಪರೆ, ಆಧ್ಯಾತ್ಮಿಕ ತಾಣಗಳು, ಸಾಂಸ್ಕೃತಿಕ ಹಬ್ಬಗಳು — ಇವುಗಳಿಂದ ಕರ್ನಾಟಕವು ಜಾಗತಿಕ ಪ್ರವಾಸೋದ್ಯಮ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ ಎಂದು ಅವರು ಹೇಳಿದರು.
ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಪ್ರವಾಸೋದ್ಯಮದ ಪಾತ್ರ
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, ಸರ್ಕಾರ ಪ್ರವಾಸೋದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಸಂಬಂಧಗಳಿಗೆ ದಾರಿ ತೆರೆದಿಡುವ ದೊಡ್ಡ ಸಾಧನವಾಗಿ ಪರಿಗಣಿಸುತ್ತಿದೆ ಎಂದು ಹೇಳಿದರು.
“ವ್ಯವಹಾರ ಪ್ರವಾಸವನ್ನು ಅನುಭವಾತ್ಮಕ ಪ್ರವಾಸೋದ್ಯಮಕ್ಕೆ ಪರಿವರ್ತಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ”, ಎಂದು ಅವರು ಹೇಳಿದರು.
KSCD ಕಾರ್ಯಸೂಚಿ
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ K.V. ಸಮಾವೇಶದಲ್ಲಿ KSCD ಚೌಕಟ್ಟು, ಹೊಣೆಗಾರಿಕೆ ಮತ್ತು ಭವಿಷ್ಯದ ಕಾರ್ಯತಂತ್ರಗಳನ್ನು ಸುದೀರ್ಘ ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದರು.
ಕೇಂದ್ರ ಸಚಿವಾಲಯ ಮತ್ತು ರಾಜತಾಂತ್ರಿಕ ಕಚೇರಿಗಳ ಮೆಚ್ಚುಗೆ
ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ವತ್ಸ ಕೃಷ್ಣ, ಹಲವು ದೇಶಗಳ ರಾಜತಾಂತ್ರಿಕ ಮುಖ್ಯಸ್ಥರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಜಾಗತಿಕ ಪ್ರವಾಸೋದ್ಯಮ ಪಾಲುದಾರರು ಸಮಾವೇಶದಲ್ಲಿ ಭಾಗವಹಿಸಿದರು.
ಸಮಾವೇಶವು ಕರ್ನಾಟಕವನ್ನು “ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ತಾಣವಾಗಿ ಸ್ಥಾಪಿಸುವತ್ತ ನಿರ್ಣಾಯಕ ಹೆಜ್ಜೆ” ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
