ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಡೆಂಘೀ ಜನರನ್ನು ಕಾಡುತ್ತಿದೆ. ಇನ್ನೊಂದು ಕಡೆ ಝೀಕಾ ವೈರಸ್ ಹಾವಳಿ ಜಾಸ್ತಿಯಾಗುತ್ತಿದೆ. ರಾಜ್ಯದಲ್ಲಿ ಝೀಕಾ ವೈರಸ್‌ಗೆ ಮೊದಲ ಬಲಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ವೈರಸ್‌ಗೆ ಒಬ್ಬ ವೃದ್ಧ ಸಾವನ್ನಪ್ಪಿದ್ದು, ಭೀತಿ ಇನ್ನಷ್ಟು ಹೆಚ್ಚು ಮಾಡಿದೆ. ನೆರೆ ರಾಜ್ಯ ಕೇರಳದಲ್ಲಿ ಝೀಕಾ ವೈರಸ್ ಹೆಚ್ಚು ಸದ್ದು ಮಾಡುತ್ತಿದ್ದು, ಇದೀಗ ರಾಜ್ಯಕ್ಕೂ ವಕ್ಕರಿಸಿದೆ. ರಾಜ್ಯದಲ್ಲಿ ಒಟ್ಟು 9 ಝೀಕಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮೂವರಿಗೆ ಝೀಕಾ ವೈರಸ್ ಅಟ್ಯಾಕ್ ಆಗಿತ್ತು. ಇದರಲ್ಲಿ ಇಬ್ಬರು ಚೇತರಿಸಿಕೊಂಡಿದ್ದಾರೆ. ಆದ್ರೆ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರದಲ್ಲಿ ಮೂವರು ಗರ್ಭಿಣಿಯರು ಸೇರಿ ಆರು ಮಂದಿಗೆ ಝೀಕಾ ವೈರಸ್ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಗರ್ಭಿಣಿಯರಿಗೆ ಝೀಕಾ ವೈರಸ್ ಬಂದರೆ ಅಪಾಯ ಎಂದು ಹೇಳಲಾಗುತ್ತಿದೆ. ಮಹಿಳೆಯ ಹೊಟ್ಟೆಯಲ್ಲಿರುವ ಬ್ರೈನ್ ಬೆಳವಣಿಗೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳುತ್ತಾರೆ. ಹೀಗಾಗಿ, ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ.
ಝೀಕಾ ವೈರಸ್‌ಗೆ ಸೂಕ್ತ ಔಷಧಿ ಇನ್ನೂ ಕಂಡುಹಿಡಿದಿಲ್ಲ. ಜೊತೆಗೆ ಲಸಿಕೆ ಕೂಡಾ ಇಲ್ಲ. ಹೀಗಾಗಿ, ಝೀಕಾ ವೈರಸ್ ಬಂದರೆ ತುಂಬಾ ಕಷ್ಟ ಎಂದು ಹೇಳಲಾಗುತ್ತಿದೆ. ಪಕ್ಕದ ಕೇರಳದಲ್ಲಿ ಇದರ ಬಾಧಿತರು ಹೆಚ್ಚಿದ್ದಾರೆ. ಸೊಳ್ಳೆಗಳಿಂದ ಈ ಝೀಕಾ ವೈರಸ್ ಹರಡುತ್ತದೆ ಎಂದು ಹೇಳಲಾಗುತ್ತಿದೆ.