ಬೆಂಗಳೂರು:
ಕರ್ನಾಟಕದ ಮಾದರಿಯಂತೆ ಮಹಾರಾಷ್ಟ್ರದಲ್ಲಿಯೂ ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಿ, ರೈತರ ಆರ್ಥಿಕಾಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳುವಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಕೆಎಂಎಫ್‍ಗೆ ಮನವಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆರಂಭಗೊಂಡ ನಂದಿನಿ ಹಾಲು ಮತ್ತು ಮೊಸರು ಮಾರುಕಟ್ಟೆ ವಿಸ್ತರಣಾ ಜಾಲಕ್ಕೆ ನಾಗ್ಪುರದಲ್ಲಿ ಚಾಲನೆ ನೀಡಿ ಮಾತನಾಡಿದ ಫಡ್ನವಿಸ್ ಅವರು, ಕರ್ನಾಟಕದಲ್ಲಿ ಕೆಎಂಎಫ್ ಸಂಸ್ಥೆಯು ರೈತರಿಂದ ನೇರವಾಗಿ ಹಾಲನ್ನು ಖರೀದಿ ಮಾಡಲಾಗುತ್ತಿದೆ. ನಮ್ಮಲ್ಲಿಯೂ ಸಹ ಇದನ್ನೇ ಮಾದರಿಯನ್ನಾಗಿ ಇಟ್ಟುಕೊಂಡು ಕೆಲಸ ಮಾಡಿದರೆ ರೈತ ಸಮೂಹಕ್ಕೆ ಇದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು.
ವಿದರ್ಭ ಭಾಗದಿಂದ ಕೆಎಂಎಫ್‍ನ ನಂದಿನಿ ಉತ್ಪನ್ನಗಳ ಮಾರಾಟವನ್ನು ಆರಂಭಿಸಿರುವುದು ಖುಷಿಯಾಗಿದೆ. ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡುತ್ತಿರುವುದನ್ನು ನಾನು ಕೇಳಿದ್ದೇನೆ. ಗ್ರಾಹಕರ ನೆಚ್ಚಿನ ನಂದಿನಿ ಉತ್ಪನ್ನಗಳು ಕರ್ನಾಟಕದಲ್ಲಿ ಮನೆ ಮಾತಾಗಿರುವುದನ್ನು ಗಮನಿಸಿದ್ದೇನೆ. ಸಹಕಾರಿ ತತ್ವವನ್ನು ಪರಿಪಾಲನೆ ಮಾಡಿಕೊಂಡು ಬರುತ್ತಿರುವ ಕೆಎಂಎಫ್ ನಂದಿನಿ ಉತ್ಪನ್ನಗಳು ಮಹಾರಾಷ್ಟ್ರದ ಪ್ರತಿ ಮನೆ ಮನೆಗೆ ತಲುಪಲಿ ಎಂದು ಫಡ್ನವಿಸ್ ಆಶಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಸಹಕಾರ ಇರುತ್ತೆ – ಕೇಂದ್ರ ಸಮಸ್ಯೆ ಮಾಡದೇ ಇದ್ದರೆ ರಾಜ್ಯಸಭೆಯಲ್ಲೂ ಬೆಂಬಲ: ಎಚ್‍ಡಿಡಿ
ಸಹಕಾರಿ ಕ್ಷೇತ್ರವು ವ್ಯವಹಾರಿಕವಾಗಿ ಅಭಿವೃದ್ದಿ ಹೊಂದಲು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಕೇಂದ್ರದಲ್ಲಿ ಸಹಕಾರಿ ಸಚಿವಾಲಯವನ್ನು ಆರಂಭಿಸಿದ್ದಾರೆ. ಇದಕ್ಕೆ ಪೂರಕವಾಗಿ ಕೆಎಂಎಫ್ ನಂತಹ ಸಂಸ್ಥೆಗಳು ಕರ್ತವ್ಯ ನಿರ್ವಹಿಸಿ ಸಹಕಾರಿ ರಂಗದ ಬೆಳವಣಿಗೆಗೆ ಶ್ರಮಿಸಲಿ. ನಂದಿನಿ ಹಾಲು ಮತ್ತು ಇತರೇ ಉತ್ಪನ್ನಗಳ ಮಾರುಕಟ್ಟೆ ಅಭಿವೃದ್ಧಿಪಡಿಸಲು ಅಗತ್ಯವಿರುವ ಎಲ್ಲ ನೆರವನ್ನು ನೀಡಲಾಗುವುದು. ದೇಶದ ಪ್ರತಿಷ್ಠಿತ ಅಮೂಲ್ ನಂತರ ಕೆಎಂಎಫ್ ಎರಡನೇ ಸ್ಥಾನ ಗಿಟ್ಟಿಸಿರುವುದು ಸಹಕಾರಿ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ನಾಗ್ಪುರ್ ಪ್ರಾಂತ್ಯದಿಂದ ಪ್ರಾರಂಭಗೊಂಡಿರುವ ಕೆಎಂಎಫ್ ಉನ್ನತಿ ಮತ್ತು ಪ್ರಗತಿಗೆ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.
ಕರ್ನಾಟಕ ಹಾಲು ಮಹಾಮಂಡಳಿಯನ್ನು ರಾಜ್ಯವಲ್ಲದೇ ನೆರೆಯ ರಾಜ್ಯಗಳಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಲು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕೆಎಂಎಫ್ ಬೆಳವಣಿಗೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿರುವ ಬಾಲಚಂದ್ರ ಅವರ ಕಾರ್ಯವನ್ನು ಮನಸಾರೆ ಕೊಂಡಾಡಿದ ಫಡ್ನಾವಿಸ್, ಅಧ್ಯಕ್ಷರ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿರುವ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರನ್ನು ಮುಕ್ತ ಕಂಠದಿಂದ ಫಡ್ನಸವಿಸ್ ಅಭಿನಂದಿಸಿದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಾತನಾಡಿ, ಕೆಎಂಎಫ್ ರಾಷ್ಟ್ರದ ಎರಡನೇ ಅತೀ ದೊಡ್ಡ ಸಹಕಾರಿ ಹಾಲು ಮಹಾಮಂಡಳಿಯಾಗಿದ್ದು, ಪ್ರತಿನಿತ್ಯ ರಾಜ್ಯದ ಹೈನುಗಾರ ರೈತರಿಂದ 90 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಿ ನಿತ್ಯ ಅಂದಾಜು ರೂ. 24 ಕೋಟಿ ಹಣ ರೈತರಿಗೆ ಪಾವತಿಸಲಾಗುತ್ತಿದೆ. ರಾಜ್ಯದ ರೈತರಿಂದ ಶೇಖರಿಸುವ ಹಾಲನ್ನು ಸಂಸ್ಕರಿಸಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಉತ್ಕ್ರಷ್ಟ ಗುಣಮಟ್ಟದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸಕಾಲಕ್ಕೆ ಒದಗಿಸುತ್ತಿದೆ ಎಂದರು.
I appreciate KMF’s initiative&appeal to also start 2way process of buying milk here so that our farmers get best price for products.
— Devendra Fadnavis (@Dev_Fadnavis) August 1, 2021
Healthy competition is must to get good prices.
Also talked on need of own strong brand of state,as it can be assuring for farmers during distress. pic.twitter.com/nLZ4zVew6C
ಕೆಎಂಎಫ್ ನಿತ್ಯ 50 ಲಕ್ಷ ಲೀಟರ್ ಹಾಲು ಸ್ಯಾಚೆ, ಯುಹೆಚ್‍ಟಿ, ಪ್ಲೆಕ್ಸಿ ಪೊಟ್ಟಣಗಳ ರೂಪದಲ್ಲಿ ಮಾರಾಟ ಮಾಡುವುದರ ಜೊತೆಗೆ ರಾಷ್ಟ್ರದ ಇತರೇ ಪ್ರಮುಖ ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೂ ಸಹ ಗುಣಮಟ್ಟದ ಹಾಲು ದೊರಕುವಂತೆ ಮಾಡಲಾಗುತ್ತಿದೆ. ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ವಿಜಯವಾಡ, ಸೊಲ್ಲಾಪೂರ ಮತ್ತು ಗೋವಾ ಪ್ರದೇಶಗಳಲ್ಲಿ ಪ್ರತಿ ದಿನ 3 ಲಕ್ಷ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಅಲ್ಲಿನ ಗ್ರಾಹಕರಿಂದ ನಂದಿನಿ ಹಾಲಿನ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ರಾಷ್ಟ್ರಮಟ್ಟದಲ್ಲಿ ನಂದಿನಿ ಬ್ರಾಂಡ್ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ನೆರೆಯ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಕೆಎಂಎಫ್‍ನಿಂದ ನಂದಿನಿ ಬ್ರಾಂಡ್‍ನ ಉತ್ಪನ್ನಗಳನ್ನು ಆರಂಭಿಸಿದ್ದೇವೆ. ಇದಕ್ಕೆ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಆಗಮಿಸಿ ಚಾಲನೆ ನೀಡಿರುವುದು ನಮಗೆ ಆನೆ ಬಲ ಬಂದಂತಾಗಿದೆ. ನಮ್ಮ ಕರ್ನಾಟಕದಲ್ಲಿ ಪ್ರಾರಂಭಿಸಿರುವ ಕ್ಷೀರಭಾಗ್ಯ ಯೋಜನೆಯನ್ನು ಮಹಾರಾಷ್ಟ್ರದ ನಾಗ್ಪುರ್ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪೌಷ್ಠಿಕತೆ ದೃಷ್ಟಿಯಿಂದ ಕ್ಷೀರಭಾಗ್ಯ ಯೋಜನೆಯನ್ನು ಆರಂಭಿಸುವಂತೆ ದೇವೇಂದ್ರ ಫಡ್ನವಿಸ್ ಅವರಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.