ಬೆಂಗಳೂರು :
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲಾ ಪಮಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ತಯಾರಾದ ನಿಯೋಜಿತ ರೂಪುರೇಷೆ (ಕಂಟಿನ್ಜೆನ್ಸಿ ಪ್ಲಾನ್) ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನಚ್ಚರಿಕೆಯಿಂದ ಸರ್ಕಾರದ ವತಿಯಿಂದ ₹5.14 ಕೋಟಿ ಹಣವನ್ನ ಬಿಡುಗಡೆ ಮಾಡಲಾಗಿದೆ. ಇದರಿಂದ, ಈ ಹಿಂದೆ ಒದಗಿಸಿದ್ದ 1 ಕೋಟಿ ಹಣ ಸೇರಿದಂತೆ ಸರ್ಕಾರ ಈವರೆಗೂ ಒಟ್ಟು ₹6.14 ಕೋಟಿ ಹಣ ನೀಡಿದಂತಾಗಿದೆ.
ರಾಜ್ಯದ ಹಲವೆಡೆ ಮುಂಗಾರಿನ ಅಭಾವ ಎದುರಾಗಿದ್ದು ಹಲವು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಕಾಣುತ್ತಿವೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ರಾಜ್ಯದಲ್ಲಿ ಬರದ ಛಾಯೆ ಎದುರಾಗುವ ಮುನ್ನವೇ ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (CEOಗಳ) ಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು.
ಈ ಬಗ್ಗೆ ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ರಚಿಸಿ 2 ಸಭೆಗಳನ್ನು ನಡೆಸಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸ್ಪಷ್ಟ ಚಿತ್ರಣ ರೂಪಿಸಿದೆ. ರಾಜ್ಯದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತೇವೆ ಎಂದು ಶಾಸನ ಸಭೆಯಲ್ಲೂ ಸರ್ಕಾರ ಪುನರುಚ್ಚರಿಸಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಎಲ್ಲಾ ಜಿಲ್ಲೆಗಳ CEOಗಳೊಂದಿಗೆ ಕಳೆದ ಒಂದು ತಿಂಗಳಲ್ಲಿ 2 ವಿಸ್ತ್ರತ ಸಭೆ ನಡೆಸಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗದಂತೆ ಪೂರ್ವ ನಿಯೋಜಿತ ರೂಪುರೇಷೆಯನ್ನ (ಕಂಟಿನ್ಜೆನ್ಸಿ ಪ್ಲಾನ್) ತಯಾರಿಸುವಂತೆ ಸೂಚನೆ ನೀಡಲಾಗಿತ್ತು.
ಇದೀಗ ಆ ವರದಿ ಪ್ರಕಾರ ಜಿಲ್ಲಾವಾರು ಎಷ್ಟು ತಾಲೂಕುಗಳಲ್ಲಿ ಮಳೆಯಾಗಿದೆ? ಎಷ್ಟು ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಲಿದೆ? ಎಲ್ಲೆಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ, ಯಾವ ಹಳ್ಳಿಗಳಿಗೆ ಕುಡಿಯುವ ನೀರನ್ನು ಟ್ಯಾಂಕರ್ ಅಥವಾ ಬಾಡಿಗೆ ಬೋರ್ ವೆಲ್ ಮೂಲಕ ಒದಗಿಸಬೇಕು ಎಂಬುದನ್ನ ಸಂಪೂರ್ಣವಾಗಿ ಪರಿಶೀಲಿಸಿ ಅಧಿಕಾರಿಗಳಿಂದ ವರದಿ ಸಿದ್ದಪಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಈ ಮೂಲಕ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆಯ ಯಾವುದೇ ಪ್ರಕರಣವೂ ಎದುರಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.