ಕೆಂಪೇಗೌಡ ವಿಮಾನ ನಿಲ್ದಾಣ ವಿಸ್ತರಣೆ: 2030ರೊಳಗೆ 80 ಮಿಲಿಯನ್ ಪ್ರಯಾಣಿಕರ ಸಾಮರ್ಥ್ಯ ಗುರಿ
ಬೆಂಗಳೂರು/ನವದೆಹಲಿ: ಹೆಚ್ಚುತ್ತಿರುವ ಪ್ರಯಾಣಿಕರ ಮತ್ತು ಸರಕು ಸಾಗಾಣಿಕೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ವಿಸ್ತರಣೆಗೆ ಮಹತ್ವದ ಯೋಜನೆ ರೂಪಿಸಲಾಗಿದೆ. 2030ರೊಳಗೆ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು 80 ಮಿಲಿಯನ್ ಪ್ರಯಾಣಿಕರಿಗೆ ಹೆಚ್ಚಿಸುವ ಉದ್ದೇಶವಿದೆ.
ಸಂಸತ್ತಿನಲ್ಲಿ ಸಂಸದ ಪಿ.ಸಿ. ಮೋಹನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ಮುರಳೀಧರ ಮೊಹೋಲ್ ಅವರು, ಪ್ರಸ್ತುತ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಸೇರಿ ಒಟ್ಟು 51.5 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿದೆ ಎಂದು ತಿಳಿಸಿದ್ದಾರೆ. 2025–26 ಆರ್ಥಿಕ ವರ್ಷದಲ್ಲಿ ಸುಮಾರು 44.5 ಮಿಲಿಯನ್ ಪ್ರಯಾಣಿಕರನ್ನು ವಿಮಾನ ನಿಲ್ದಾಣ ನಿರ್ವಹಿಸಿದೆ.
ಪ್ರಯಾಣಿಕರ ಸಂಖ್ಯೆಯು ಸಾಮರ್ಥ್ಯದ ಮಿತಿಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ 2027ರಿಂದ 2030ರವರೆಗೆ ಹಂತ ಹಂತವಾಗಿ ವಿಸ್ತರಣೆ ಕಾರ್ಯ ಕೈಗೊಳ್ಳಲಾಗುತ್ತದೆ. ಇದರಡಿ ಟ್ಯಾಕ್ಸಿವೇ, ಏಪ್ರನ್ ಹಾಗೂ ಟರ್ಮಿನಲ್ ಮೂಲಸೌಕರ್ಯವನ್ನು ವಿಸ್ತರಿಸಲಾಗುತ್ತದೆ.
ಸರಕು ಸಾಗಾಣಿಕೆ ವಿಷಯದಲ್ಲಿ, ಪ್ರಸ್ತುತ ವಿಮಾನ ನಿಲ್ದಾಣವು ವರ್ಷಕ್ಕೆ 1 ಮಿಲಿಯನ್ ಮೆಟ್ರಿಕ್ ಟನ್ಗಿಂತ ಹೆಚ್ಚು ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಸರಕು ಸಾಗಣೆ ಪ್ರಮಾಣ ಸುಮಾರು 0.53 ಮಿಲಿಯನ್ ಮೆಟ್ರಿಕ್ ಟನ್ ಆಗಿದೆ.
ಇದಲ್ಲದೆ, ಈಗಾಗಲೇ ಎರಡು ಸಮಾಂತರ ಸ್ವತಂತ್ರ ರನ್ವೇಗಳನ್ನು ಹೊಂದಿರುವ ವಿಮಾನ ನಿಲ್ದಾಣವು ಮುಂದಿನ ವಿಸ್ತರಣೆಗೆ ಅಗತ್ಯವಾದ ಮೂಲಸೌಕರ್ಯವನ್ನು ಹೊಂದಿದೆ.
ವಿಮಾನ ನಿಲ್ದಾಣ ವಿಸ್ತರಣೆ ಪ್ರಕ್ರಿಯೆ concession ಒಪ್ಪಂದಗಳ ಆಧಾರದ ಮೇಲೆ ನಿಗದಿತ ಸಾಮರ್ಥ್ಯ ಮಿತಿಗಳನ್ನು ತಲುಪಿದಾಗ ಪ್ರಾರಂಭವಾಗುತ್ತದೆ. ಪ್ರಯಾಣಿಕರ ಏರಿಕೆ, ಕಾರ್ಗೋ ಬೇಡಿಕೆ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತದೆ.
ಈ ವಿಸ್ತರಣೆಯ ಮೂಲಕ ಬೆಂಗಳೂರು ದೇಶದ ಪ್ರಮುಖ ಏವಿಯೇಶನ್ ಹಬ್ ಆಗಿ ಮತ್ತಷ್ಟು ಬಲ ಪಡೆಯುವ ನಿರೀಕ್ಷೆಯಿದ್ದು, ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ.
