ಬೆಂಗಳೂರು:
ಬೆಂಗಳೂರು-ಮಂಗಳೂರು ನಡುವಿನ ಇಂಡಿಗೋ ವಿಮಾನ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಆರಂಭಿಸಿದೆ. ಇದರ ಪರಿಣಾಮ 6 ಪ್ರಯಾಣಿಕರು ನಿಲ್ದಾಣದಲ್ಲೇ ಬಾಕಿಯಾದ ಘಟನೆ ನಡೆದಿದೆ. ಈ ಪ್ರಯಾಣಿಕರು ಮುಂದಿನ ವಿಮಾನ ಪ್ರಯಾಣಕ್ಕೆ 6 ಗಂಟೆ ಕಾಯಬೇಕಾಯಿತು.
ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಳೆದ ಶುಕ್ರವಾರ (ಆಗಸ್ಟ್ 4) ದಂದು ಮಂಗಳೂರಿಗೆ ತೆರಳ ಬೇಕಿದ್ದ ಇಂಡಿಗೋ ವಿಮಾನವೂ ನಿಗದಿತ ಸಮಯಕ್ಕಿಂತ 12 ನಿಮಿಷ ಮೊದಲೇ ಹಾರಾಟ ಮಾಡಿದ್ದರ ಪರಿಣಾಮವಾಗಿ 6 ಜನ ಪ್ರಯಾಣಿಕರಿಗೆ ವಿಮಾನ ತಪ್ಪಿದ್ದು, ಮಾಡದ ತಪ್ಪಿಗೆ ಸತತ 6 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಹೊರಟ ಇಂಡಿಗೋ 6ಇ 6162 ವಿಮಾನ ಮಧ್ಯಾಹ್ನ 2.55 ನಿಮಿಷಕ್ಕೆ ಬೆಂಗಳೂರು ಕೆಂಂಪೇಗೌಡ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಬೇಕಿತ್ತು. ಆದರೆ ಇಂಡಿಗೋ ಏರ್‌ಲೈನ್ಸ್ ಈ ಸಮಯನ್ನು ಅಂತಿಮ ಹಂತದಲ್ಲಿ ಬದಲಾವಣೆ ಮಾಡಿದೆ. 2.55ರ ಬದಲು 2.42ಕ್ಕೆ ವಿಮಾನ ಟೇಕ್ ಆಫ್ ಆಗಿದೆ. ಕೆಲ ಪ್ರಯಾಣಿಕರು ವಿಮಾನ ಟೇಕ್ ಆಫ್ ಆಗಲು ಇನ್ನೂ 3 ರಿಂದ 5 ನಿಮಿಷಗಳಿರುವಾಗ ಎಲ್ಲಾ ತಪಾಸಣೆ ಮುಗಿಸಿ ಹಾಜರಾಗಿದ್ದಾರೆ. ಅಷ್ಟರೊಳಗೆ ವಿಮಾನ ಆಗಸದಲ್ಲಿ ಪ್ರಯಾಣ ಮುಂದವರಿಸಿತ್ತು. ಹೀಗಾಗಿ 6 ಪ್ರಯಾಣಿಕರು ನಿಲ್ದಾಣದಲ್ಲೇ ಬಾಕಿಯಾದ ಘಟನೆ ನಡೆದಿದೆ.
ಇಂಡಿಗೋ ವಿಮಾನ ಅಧಿಕಾರಿಗಳ ವಿರುದ್ಧ 6 ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ವಿಮಾನದ ಸಮಯವನ್ನು ಅಂತಿಮ ಹಂತದಲ್ಲಿ ಬದಲಾವಣೆ ಮಾಡಿದ್ದಾರೆ. ಈ ಕುರಿತು ಯಾವುದೇ ಸಂದೇಶ ಬಂದಿಲ್ಲ. ವೆಬ್‌ಸೈಟ್‌ನಲ್ಲಿ ಸಮಯ ಬದಲಾವಣೆ ಮಾಡಿದ್ದಾರೆ. ಟಿಕೆಟ್ ಬುಕ್ ಮಾಡಿ, ವೆಬ್‌ಚೆಕಿನ್ ಕೂಡ ಮಾಡಲಾಗಿದೆ. ಹೀಗಿರುವಾಗ ಪದೇ ಪದೇ ವೆಬ್‌ಸೈಟ್ ಕ್ಲಿಕ್ ಮಾಡಿ ವಿಮಾನ ಪರಿಶೀಲಿಸುವ ಅಗತ್ಯವಿಲ್ಲ. ಇದು ಅದಿಕಾರಿಗಳ ಬೇಜವಾಬ್ದಾರಿ ತನ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಮಧ್ಯಾಹ್ನ 2.55ರ ವಿಮಾನ ಮಿಸ್ ಮಾಡಿಕೊಂಡ 6 ಪ್ರಯಾಣಿಕರು ಬರೋಬ್ಬರಿ 6 ಗಂಟೆ ಕಾದಿದ್ದಾರೆ. ಬಳಿಕ ರಾತ್ರಿ 8.20ರ ವಿಮಾನದ ಮೂಲಕ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಎಲ್ಲಾ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.