ಬೆಂಗಳೂರು: ಬೆಂಗಳೂರು ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಹೈಡೋ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಾತ್ಮೀಧಾರರಿಂದ ಬಂದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಎನ್.ಜಿ.ವಿ ಗೇಟ್ ಬಳಿಯ ಮುಖ್ಯರಸ್ತೆಯಲ್ಲಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯಿಂದ 1 ಕೆ.ಜಿ 8 ಗ್ರಾಂ ಹೈಡೋ ಗಾಂಜಾ, ಒಂದು ಮೊಬೈಲ್ ಫೋನ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ವಸ್ತುಗಳ ಮೌಲ್ಯ ಸುಮಾರು ₹1 ಕೋಟಿ ಎಂದು ಅಂದಾಜಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ಹೈಡೋ ಗಾಂಜಾವನ್ನು ಕೇರಳದಿಂದ ಕಡಿಮೆ ಬೆಲೆಗೆ ತರಿಸಿ, ಬೆಂಗಳೂರಿನ ಯುವಕರು, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಮೂಲಕ ಅಕ್ರಮ ಲಾಭ ಗಳಿಸುತ್ತಿದ್ದೆನೆಂದು ಒಪ್ಪಿಕೊಂಡಿದ್ದಾನೆ.
ಈ ಸಂಬಂಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಕೋರಮಂಗಲ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.
