ಬೆಂಗಳೂರು:
ಉದ್ಯಮ ಸ್ಥಾಪನೆಯ ಉದ್ದೇಶಕ್ಕೆಂದು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (ಕೆಐಎಡಿಬಿ) ಇದುವರೆಗೆ ಹಂಚಿರುವ ನಿವೇಶನಗಳಿಂದ 4,248 ಕೋಟಿ ರೂ.ಗಳಷ್ಟು ಬೃಹತ್ ಬಾಕಿ ಹಣ ಬರಬೇಕಿದೆ. ಇದನ್ನು ಮುಂದಿನ ನಾಲ್ಕು ತಿಂಗಳಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ ಬಿ ಪಾಟೀಲ ಗಡುವು ವಿಧಿಸಿದ್ದಾರೆ.
ಖನಿಜ ಭವನದಲ್ಲಿ ಕೆಐಎಡಿಬಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಈ ಎಚ್ಚರಿಕೆ ನೀಡಿದ್ದಾರೆ. ಇದರಲ್ಲಿ ವಿಫಲರಾದರೆ ಮಂಡಲಿಯ ಕಾರ್ಯದರ್ಶಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೆಐಎಡಿಬಿ ಆರಂಭವಾದಾಗಿನಿಂದಲೂ ಈ ಸಮಸ್ಯೆ ಇದೆ. ಈಗಿನ ಅಂಕಿಅಂಶಗಳ ಪ್ರಕಾರ, ಮಂಡಲಿಯು ಸಾಮಾನ್ಯ ವರ್ಗದವರಿಗೆ ಮಂಜೂರು ಮಾಡಿರುವ 5,932 ಕೈಗಾರಿಕಾ ಘಟಕಗಳಿಂದ 2,825 ಕೋಟಿ ರೂ. ಬರಬೇಕಾಗಿದೆ. ಎಸ್ಸಿ- ಎಸ್ಟಿ ವರ್ಗಗಳ ಅಡಿಯಲ್ಲಿ 741 ಕೋಟಿ ರೂ. ಬಾಕಿ ಉಳಿದಿದೆ. ಇದರ ಜತೆಗೆ ಎಸ್ಸಿ- ಎಸ್ಟಿ ವರ್ಗಗಳಿಗೆ ನೀಡುವ ಸಬ್ಸಿಡಿ ಬಾಬ್ತಿನಲ್ಲಿ 680 ಕೋಟಿ ಇದೆ ಎಂದು ಅವರು ವಿವರಿಸಿದರು.
ಕೆಐಎಡಿಬಿಯಿಂದ ನಿವೇಶನಗಳನ್ನು ಪಡೆದಿರುವವರಲ್ಲಿ ಎಷ್ಟೋ ಜನ ಈ ನಿವೇಶನಗಳನ್ನು ಹಾಗೆಯೇ ಬಿಟ್ಟುಕೊಂಡಿದ್ದಾರೆ. ಉದ್ಯಮ ಸ್ಥಾಪಿಸಿ ಇನ್ನೇನು ತಮ್ಮ ಹೆಸರಿಗೆ ನಿವೇಶನ ಮಾಡಿಸಿಕೊಳ್ಳುವ ಕೊನೆ ಹಂತದಲ್ಲಿ ಇರುವವರೇ ₹2,100 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಇಂಥವರ ವಿರುದ್ಧ ನಾಲ್ಕು ತಿಂಗಳೊಳಗೆ ಕಠಿಣ ಕ್ರಮ ಜರುಗಿಸಿ ಬಾಕಿ ಹಣ ವಸೂಲಿ ಮಾಡಲೇಬೇಕು. ಕಾನೂನು ಕ್ರಮದ ಜತೆಗೆ ನಿವೇಶನ ಮಂಜೂರಾತಿಯನ್ನೇ ರದ್ದುಪಡಿಸಬೇಕಾದ ನಿಷ್ಠುರತೆಯನ್ನು ಪ್ರದರ್ಶಿಸಲೇಬೇಕಾಗಿದೆ ಎಂದು ಅವರು ವಿವರಿಸಿದರು.
ಕೆಐಎಡಿಬಿ ಮೊದಲಿನಿಂದಲೇ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತ ಬರಬೇಕಾಗಿತ್ತು. ಆಗ ಈ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಮಂಡಲಿಯ ಕಾರ್ಯದರ್ಶಿಗಳು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪಾಟೀಲ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಮಹೇಶ್, ಕೈಗಾರಿಕಾ ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.