ಚೆನ್ನೈ : ಆಂಡ್ರೆ ರಸೆಲ್(3-19), ಮಿಚೆಲ್ ಸ್ಟಾರ್ಕ್(2-14)ಹಾಗೂ ಹರ್ಷಿತ್ ರಾಣಾ(2-24) ಅವರ ಕರಾರುವಾಕ್ ಬೌಲಿಂಗ್ ದಾಳಿ ಹಾಗೂ ವೆಂಕಟೇಶ್ ಅಯ್ಯರ್ ಅರ್ಧಶತಕದ (ಔಟಾಗದೆ 52 ರನ್, 26 ಎಸೆತ, 4 ಬೌಂಡರಿ, 3 ಸಿಕ್ಸರ್) ಕೊಡುಗೆಯ ನೆರವಿನಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಐಪಿಎಲ್ ಫೈನಲ್ ಪಂದ್ಯದಲ್ಲಿ 8 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಮಣಿಸಿತು.
ಈ ಮೂಲಕ ಮೂರನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು. ಕೆಕೆಆರ್ ಈ ಹಿಂದೆ 2012 ಹಾಗೂ 2014ರಲ್ಲಿ ಚಾಂಪಿಯನ್ ಆಗಿತ್ತು.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ಏಕಪಕ್ಷೀಯವಾಗಿ ಸಾಗಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಗೆಲ್ಲಲು 114 ರನ್ ಗುರಿ ಪಡೆದ ಕೆಕೆಆರ್ 10.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು .
ಟಾಸ್ ಜಯಿಸಿದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಕಮಿನ್ಸ್ ನಿರ್ಧಾರ ಕೈಕೊಟ್ಟಿದ್ದು ಹೈದರಾಬಾದ್ 18.3 ಓವರ್‌ಗಳಲ್ಲಿ ಕೇವಲ 113 ರನ್‌ಗೆ ಆಲೌಟಾಯಿತು. ಇದು ಐಪಿಎಲ್ ಫೈನಲ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ.
ಇನಿಂಗ್ಸ್‌ನ ಮೊದಲ ಓವರ್‌ನ 5ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ(2 ರನ್)ವೇಗದ ಬೌಲ್ ಸ್ಟಾರ್ಕ್ ಬೌಲಿಂಗ್‌ಗೆ ಕ್ಲೀನ್‌ಬೌಲ್ಡಾದರು. ಇನ್ನೋರ್ವ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ರನ್ ಖಾತೆ ತೆರೆಯುವ ಮೊದಲೇ ವೈಭವ್ ಅರೋರಗೆ ವಿಕೆಟ್ ಒಪ್ಪಿಸಿದರು.
3ನೇ ಕ್ರಮಾಂಕದ ಆಟಗಾರ ರಾಹುಲ್ ತ್ರಿಪಾಠಿ (9 ರನ್) ಸ್ಟಾರ್ಕ್‌ಗೆ ಎರಡನೇ ಬಲಿಯಾದರು.
ಮರ್ಕ್ರಮ್(20 ರನ್, 23 ಎಸೆತ)ಹಾಗೂ ನಿತಿಶ್ ಕುಮಾರ್ ರೆಡ್ಡಿ(13) 4ನೇ ವಿಕೆಟ್‌ಗೆ 26 ರನ್ ಸೇರಿಸಿ ಕಿರು ಜೊತೆಯಾಟ ನಡೆಸಿದರು. ಮರ್ಕ್ರಮ್, ಆಲ್‌ರೌಂಡರ್ ಶಹಬಾಝ್ ಅಹ್ಮದ್(8 ರನ್)ಹಾಗೂ ಅಬ್ದುಲ್ ಸಮದ್(4 ರನ್)ಬೆನ್ನುಬೆನ್ನಿಗೆ ಔಟಾದರು.
ವಿಕೆಟ್‌ಕೀಪರ್-ಬ್ಯಾಟರ್ ಹೆನ್ರಿಕ್ ಕ್ಲಾಸೆನ್ 16 ರನ್ ಗಳಿಸಿ ಹರ್ಷಿತ್ ರಾಣಾಗೆ ಕ್ಲೀನ್ ಬೌಲ್ಡಾದಾಗ ಹೈದರಾಬಾದ್‌ನ ಹೋರಾಟ ಬಹುತೇಕ ಅಂತ್ಯವಾಯಿತು. ನಾಯಕ ಪ್ಯಾಟ್ ಕಮಿನ್ಸ್(24 ) ಹಾಗೂ ಜಯದೇವ್ ಉನದ್ಕಟ್(4 ರನ್)ಒಂದಷ್ಟು ಪ್ರತಿರೋಧ ಒಡ್ಡಿ ಹೈದರಾಬಾದ್ 113 ರನ್ ಗಳಿಸಲು ನೆರವಾದರು. ವೇಗದ ಬೌಲರ್ ಕಮಿನ್ಸ್ ಹೈದರಾಬಾದ್ ಪರ 24 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿರುವುದು ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಂತಿತ್ತು.
ಕೆಕೆಆರ್ ಬೌಲಿಂಗ್ ವಿಭಾಗದಲ್ಲಿ ಆಲ್‌ರೌಂಡರ್ ಆಂಡ್ರೆ ರಸೆಲ್(3-19)ಯಶಸ್ವಿ ಬೌಲರ್ ಎನಿಸಿಕೊಂಡರು. ಮಿಚೆಲ್ ಸ್ಟಾರ್ಕ್(2-14), ಹರ್ಷಿತ್ ರಾಣಾ(2-24) ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಸುನೀಲ್ ನರೇನ್(1-16) ಹಾಗೂ ವೈಭವ್ ಅರೋರ(1-24) ತಲಾ ಒಂದು ವಿಕೆಟ್ ಪಡೆದರು.