ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (DCC ಬ್ಯಾಂಕ್) ಚುನಾವಣೆಯಲ್ಲಿ ಮಾಜಿ ಸಹಕಾರ ಸಚಿವ ಹಾಗೂ ಶಾಸಕರಾದ ಕೆ.ಎನ್. ರಾಜಣ್ಣ ಅವರು ಸತತ ಏಳನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ ಜಿ.ಜೆ. ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ 9ರಿಂದ 11 ಗಂಟೆಯವರೆಗೆ ಬ್ಯಾಂಕ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ನಂತರ 11 ಗಂಟೆಗೆ ನಿರ್ದೇಶಕರ ಸಭೆ ಸೇರಿತು. ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ರಾಜಣ್ಣ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಜೆ. ರಾಜಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್ ಅವರು ಇಬ್ಬರನ್ನೂ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆಂದು ಘೋಷಿಸಿದರು.
ಚುನಾವಣೆ ಫಲಿತಾಂಶ ಘೋಷಣೆಯ ಬಳಿಕ, ಚುನಾವಣಾಧಿಕಾರಿ ನಾಹಿದಾ ಜಮ್ ಜಮ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಬ್ಯಾಂಕ್ ಆವರಣದ ಹೊರಭಾಗದಲ್ಲಿ ನೆರೆದಿದ್ದ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯಘೋಷಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಬ್ಯಾಂಕ್ ಮುಂಭಾಗದ ರಸ್ತೆ ಮುಚ್ಚಲಾಗಿತ್ತು ಮತ್ತು ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಸತತ 7ನೇ ಬಾರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಎನ್. ರಾಜಣ್ಣ ಅವರ ಅವಿರೋಧ ಆಯ್ಕೆಯು, ತುಮಕೂರು ಸಹಕಾರ ಕ್ಷೇತ್ರದಲ್ಲಿ ಅವರ ಬಲಿಷ್ಠ ಹಾದರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.