ಜನವರಿ 5ರಂದು ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಬೃಹತ್ ಹೋರಾಟ
ಬೆಂಗಳೂರು: ಕೋಗಿಲು ಅಕ್ರಮ ಮನೆ–ಗುಡಿಸಲು ತೆರವು ಪ್ರಕರಣದಲ್ಲಿ ವಾಸಸ್ಥಳ ಕಳೆದುಕೊಂಡವರಿಗೆ ಸರ್ಕಾರ ಮನೆ ನೀಡಲು ಮುಂದಾದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದರ ಜೊತೆಗೆ ಮಾನ್ಯ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿಗೆ ಸೇರಿದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ಮಾಡಲಾಗಿತ್ತು. ಆದರೆ ಸರ್ಕಾರ ಈಗ ಅಕ್ರಮವಾಗಿ ವಾಸಿಸಿದ್ದವರಿಗೆ ಪರ್ಯಾಯ ಮನೆ ನೀಡುವ ಮೂಲಕ ನ್ಯಾಯಸಮ್ಮತ ವಸತಿ ನೀತಿಗೆ ಭಾರೀ ಹೊಡೆತ ನೀಡುತ್ತಿದೆ ಎಂದು ಆರೋಪಿಸಿದರು.
“ಇಂದು ನಿಜವಾದ ಫಲಾನುಭವಿಯೊಬ್ಬ ಮನೆ ಪಡೆಯಬೇಕಾದರೆ ಕನಿಷ್ಠ ₹10.5 ಲಕ್ಷ ಹಣ ಕಟ್ಟಬೇಕು. ಬ್ಯಾಂಕ್ ಸಾಲ ಅಥವಾ ಸ್ವಂತ ಹಣದಿಂದ ಇದನ್ನು ಭರಿಸಬೇಕಾಗುತ್ತದೆ. ಆದರೆ ಕೋಗಿಲು ಪ್ರಕರಣದಲ್ಲಿ ಬಿಬಿಎಂಪಿಯಿಂದ ₹5 ಲಕ್ಷ, ಅಲ್ಪಸಂಖ್ಯಾತ ಇಲಾಖೆಯಿಂದ ₹2.5 ಲಕ್ಷ, ಇತರ ಸಬ್ಸಿಡಿಗಳನ್ನು ಸೇರಿಸಿ ಕೇವಲ ₹2.5 ಲಕ್ಷಕ್ಕೆ ಮನೆ ಕೊಡುತ್ತೇವೆ ಎನ್ನುವುದು ಸಂಪೂರ್ಣ ಅಸಮಾನತೆ. ಹೀಗಾದರೆ ಈಗ ನಿರ್ಮಾಣವಾಗುತ್ತಿರುವ ಒಂದು ಲಕ್ಷ ಮನೆಗಳ ಯೋಜನೆ ಸಂಪೂರ್ಣ ಕುಸಿಯುತ್ತದೆ. ಬೆಂಗಳೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಸುಮಾರು **45 ಸಾವಿರ ಮನೆಗಳಿಗೆ ಯಾರೂ ಹಣ ಕಟ್ಟುವುದಿಲ್ಲ. ಎಲ್ಲರೂ ₹2.5 ಲಕ್ಷಕ್ಕೇ ಅಂಟಿಕೊಳ್ಳುತ್ತಾರೆ. ಇದು ಸರ್ಕಾರಕ್ಕೆ ಭಾರೀ ಮುಜುಗರ ಮತ್ತು ದೊಡ್ಡ ಹೊಡೆತ ಕೊಡಲಿದೆ” ಎಂದು ವಿಶ್ವನಾಥ್ ಎಚ್ಚರಿಸಿದರು.
ಇದಕ್ಕೂ ಮೀರಿ ಸರ್ಕಾರ ಮನೆ ಹಂಚಿಕೆ ಮುಂದುವರಿಸಿದರೆ, ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯ. ಈಗಾಗಲೇ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
“ನಾಳೆಯೇ ಮನೆ ಹಂಚಿಕೆ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಅದು ಸಾಧ್ಯವೇ ಇಲ್ಲ. ಕನಿಷ್ಠ ಐದು ವರ್ಷ ವಾಸಿಸಿದ್ದ ದಾಖಲೆ ಬೇಕು. 18 ವಿಧದ ದಾಖಲೆಗಳನ್ನು ಕೇಳಲಾಗಿದೆ. ಯಾವ ವಿಶೇಷ ಪ್ರಕರಣ ಅಂತ ಕೇಳಿದರೆ ಉತ್ತರವೇ ಇಲ್ಲ. ಹೀಗೆ ತುರ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಆಗೋದಿಲ್ಲ” ಎಂದು ಅವರು ಪ್ರಶ್ನಿಸಿದರು.
ವಿದೇಶಿಗರ ವಿಚಾರ ಎತ್ತಿದ ವಿಶ್ವನಾಥ್
“ಕಾಂಗ್ರೆಸ್ ಹೈಕಮಾಂಡ್ ಹೇಳಿತು, ಕೇರಳದ ಮುಖ್ಯಮಂತ್ರಿ ಟ್ವೀಟ್ ಮಾಡಿದರು, ಪಾಕಿಸ್ತಾನದಿಂದ ಹೇಳಿಕೆ ಬಂತು ಅಂತ ತಕ್ಷಣ ಮನೆ ಕೊಡಲು ಮುಂದಾದರೆ ಹೇಗೆ? ಪಾಕಿಸ್ತಾನ, ಬಾಂಗ್ಲಾದೇಶದಿಂದ ಬಂದ ಹಿಂದೂ, ಕ್ರಿಶ್ಚಿಯನ್, ಸಿಖ್ ಸೇರಿ ಅನೇಕ ಅಲ್ಪಸಂಖ್ಯಾತರು ದೇಶದಾದ್ಯಂತ ಬೀದಿಬೀದಿಗಳಲ್ಲಿ ಅಲೆಯುತ್ತಿದ್ದಾರೆ. ಅವರಿಗೆ ಯಾವುದೇ ಸರ್ಕಾರ ಮನೆ ಕೊಟ್ಟಿಲ್ಲ. ಅವರಿಗೆ ಪೌರತ್ವ ನೀಡಬೇಕೆಂದರೆ ಇದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ವಿರೋಧಿಸುತ್ತವೆ. ಹಾಗಾದರೆ ಇಲ್ಲಿ ತುರ್ತು ಏನು?” ಎಂದು ಅವರು ಪ್ರಶ್ನಿಸಿದರು.
ಇದು ಅಲ್ಪಸಂಖ್ಯಾತರ ವೋಟು ತೃಪ್ತಿಪಡಿಸುವ ರಾಜಕೀಯದ ಮುಂದುವರೆದ ಭಾಗ. ಕೇರಳದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕವನ್ನು ಬಲಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಕ್ರಮಕ್ಕೆ ರಾಜಕೀಯ ಆಶ್ರಯ ಆರೋಪ
ಕೋಗಿಲು ಗ್ರಾಮ ಪಕ್ಕದ ಬಿಬಿಎಂಪಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹಂತ ಹಂತವಾಗಿ ಅಕ್ರಮ ಮನೆಗಳು ನಿರ್ಮಾಣವಾಗಿದ್ದವು. ಸ್ಥಳೀಯ ಕಾಂಗ್ರೆಸ್ನ ಅಲ್ಪಸಂಖ್ಯಾತ ಮುಖಂಡರು “ಮನೆ ಕೊಡಿಸ್ತೇವೆ” ಎಂದು ವಲಸಿಗರು ಮತ್ತು ಸ್ಥಳೀಯರಿಂದ ಹಣ ವಸೂಲಿ ಮಾಡಿದ್ದಾರೆ. ಕೆಲವರು ಅಲ್ಲಿ ಮನೆ ಕಟ್ಟಿಸಿ ಬಾಡಿಗೆಗೆ ನೀಡಿ ಪ್ರತಿ ತಿಂಗಳು ಹಣ ವಸೂಲಿ ಮಾಡುತ್ತಿದ್ದರು. ಅಲ್ಲಿ ವಾಸಿಸಿದ್ದವರೆಲ್ಲರೂ ಸ್ವಂತ ಸೂರಿಗಾಗಿ ಅಲ್ಲ, ವ್ಯಾಪಾರ ಉದ್ದೇಶದಿಂದಲೇ ಇದ್ದರು ಎಂದು ವಿಶ್ವನಾಥ್ ಗಂಭೀರ ಆರೋಪ ಮಾಡಿದರು.
ಸರ್ಕಾರ ಮತ್ತು ಅಧಿಕಾರಿಗಳು ಕಾನೂನುಬದ್ಧವಾಗಿ ನೋಟಿಸ್ ನೀಡಿ ಮನೆಗಳನ್ನು ತೆರವು ಮಾಡಿದ್ದರು. ತೆರವು ಮಾಡಿದ ಬಳಿಕ ಎರಡು ದಿನ ಯಾವುದೇ ಚರ್ಚೆಯೇ ಇರಲಿಲ್ಲ. ಆದರೆ ಕೇರಳ ಮುಖ್ಯಮಂತ್ರಿ ಹೇಳಿಕೆ ನೀಡಿದ ತಕ್ಷಣ ಕಾಂಗ್ರೆಸ್ ವರಿಷ್ಠರು, ರಾಷ್ಟ್ರೀಯ ನಾಯಕರು, ಕೆ.ಸಿ. ವೇಣುಗೋಪಾಲ್ ಸೇರಿದಂತೆ ರಾಜ್ಯದ ಉಸ್ತುವಾರಿಗಳು ಒತ್ತಡ ಹೇರಿದರು. ಇದರ ಪರಿಣಾಮವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಅಲ್ಪಸಂಖ್ಯಾತ ಸಚಿವರು ಸ್ಥಳ ಪರಿಶೀಲನೆ ನಡೆಸಿ “ಅನ್ಯಾಯವಾಗಿದೆ” ಎಂದು ಹೇಳಿ ಮನೆ ನೀಡುವ ಭರವಸೆ ನೀಡಿದ್ದಾರೆ ಎಂದು ಆರೋಪಿಸಿದರು.
“ಪ್ರವಾಹ ಬಂದಾಗಲೂ ಇಲ್ಲ, ಭೂಕಂಪ ಬಂದಾಗಲೂ ಇಲ್ಲ, ಐಪಿಎಲ್ ಕಾಲ್ತುಳಿತದ ವೇಳೆಗೂ ಇಲ್ಲ. ಆದರೆ ಇಲ್ಲಿ ಮಾತ್ರ ಮುಖ್ಯಮಂತ್ರಿ ತುರ್ತು ಸಭೆ ನಡೆಸಿ ಪರಿಹಾರ ಘೋಷಿಸಿದ್ದಾರೆ. ಬೈಯಪ್ಪನಹಳ್ಳಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿಯಲ್ಲಿ ನಿರ್ಮಿಸಿದ ಒಂದು ಲಕ್ಷ ಮನೆ / ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳನ್ನು ತರಾತುರಿಯಲ್ಲಿ ಹಂಚಲು ಸರ್ಕಾರ ಹೊರಟಿದೆ” ಎಂದು ವಿಶ್ವನಾಥ್ ಆಕ್ಷೇಪಿಸಿದರು.
ಜನವರಿ 5ರಂದು ಬಿಜೆಪಿ ಬೃಹತ್ ಹೋರಾಟ
ಕೋಗಿಲು ಪ್ರಕರಣದ ವಿರುದ್ಧ ಜನವರಿ 5ರಂದು ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ವತಿಯಿಂದ ದೊಡ್ಡ ಪ್ರಮಾಣದ ಹೋರಾಟ ನಡೆಸಲಾಗುವುದು ಎಂದು ವಿಶ್ವನಾಥ್ ಘೋಷಿಸಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಚಿಸಿರುವ ಐದು ಸದಸ್ಯರ ಸತ್ಯಾಸತ್ಯತೆ ಸಮಿತಿಯ ಮೊದಲ ಸಭೆ ಇಂದು ನಡೆದಿದೆ. ಸ್ಥಳ ಪರಿಶೀಲನೆ ನಡೆಸಿ, ಸರ್ವೇ ನಂಬರ್, ಯಾವ ರಾಜ್ಯದವರು, ಯಾವ ದೇಶದವರು ಎಂಬ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಒಂದು ವಾರದಲ್ಲಿ ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
“ನನ್ನ ಕ್ಷೇತ್ರದಲ್ಲೂ ಮನೆಗಳು ನಿರ್ಮಾಣ ಹಂತದಲ್ಲಿವೆ. ಆರು ವರ್ಷಗಳ ಹಿಂದೆ ₹1 ಲಕ್ಷ ಹಣ ಕಟ್ಟಿದವರಿಗೆ ಇಂದಿಗೂ ಮನೆ ಸಿಕ್ಕಿಲ್ಲ. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಪಡೆಯಲು ಬೆಂಗಳೂರು ನಗರದಲ್ಲಿ ಐದು ವರ್ಷ ವಾಸಿಸಿದ್ದ ದೃಢೀಕರಣ ಪತ್ರ ಅಗತ್ಯ. ಅಧಿಕಾರಿಗಳು ಹೀಗೆ ತಪ್ಪು ಪ್ರಮಾಣಪತ್ರ ನೀಡಿದರೆ ಅದು ಕಾನೂನುಬಾಹಿರ” ಎಂದು ಎಚ್ಚರಿಸಿದರು.
ಬೈಯಪ್ಪನಹಳ್ಳಿಯ 14 ಮಹಡಿ ಕಟ್ಟಡದಲ್ಲಿ ಆನ್ಲೈನ್ ಮೂಲಕ ಶೇ 50 ಮನೆಗಳ ಮಂಜೂರಾತಿ ನಡೆದಿದೆ. ಶಾಸಕರ ಕೋಟಾದ ಶೇ 50 ಮನೆಗಳನ್ನೂ ಇನ್ನೂ ಹಂಚಿಕೆ ಮಾಡಿಲ್ಲ. ಆರು ವರ್ಷಗಳಿಂದ ಕಾಯುವವರಿಗೆ ಮನೆ ಇಲ್ಲ, ಆದರೆ ವಾರದಲ್ಲೇ ಮನೆ ಕೊಡ್ತೇವೆ ಎನ್ನುವುದು ಅಕ್ರಮ ಎಂದು ಅವರು ಆಕ್ಷೇಪಿಸಿದರು.
“ಸರ್ಕಾರಿ ಜಾಗಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದು ಅಕ್ರಮವಲ್ಲವೇ? ಮನೆ ಕಟ್ಟಿದವರ ಮೇಲೆ ಹಾಗೂ ವಿದ್ಯುತ್ ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಿತ್ತು. ಸರ್ಕಾರ ತರಾತುರಿಯಲ್ಲಿ ಮನೆ ನೀಡಿದರೆ, ಅದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸುತ್ತೇವೆ, ರಾಜ್ಯಪಾಲರಿಗೂ ದೂರು ನೀಡುತ್ತೇವೆ” ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
