ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದ ಮೇಲೆ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್ಗಳನ್ನು ತೆರವುಗೊಳಿಸಿದ ಬಳಿಕ ಉಂಟಾದ ವಿವಾದದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನವೀಯ ದೃಷ್ಟಿಕೋನದ ಮಹತ್ವದ ತೀರ್ಮಾನ ಘೋಷಿಸಿದ್ದಾರೆ. ಕೋಗಿಲು ಪ್ರದೇಶದಲ್ಲಿ ಸೂರು ಕಳೆದುಕೊಂಡ ಅರ್ಹ ಕುಟುಂಬಗಳಿಗೆ ಬೈಯ್ಯಪ್ಪನಹಳ್ಳಿಯಲ್ಲಿ, ಕೋಗಿಲಿನಿಂದ ಕೇವಲ 7 ಕಿ.ಮೀ ವ್ಯಾಪ್ತಿಯಲ್ಲೇ ಪರ್ಯಾಯ ಮನೆಗಳನ್ನು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಡಿಸೆಂಬರ್ 20ರಂದು ಕೋಗಿಲು ಬಡಾವಣೆಯಲ್ಲಿ ಸುಮಾರು 167 ಅಕ್ರಮ ಶೆಡ್ಗಳನ್ನು ತೆರವುಗೊಳಿಸಲಾಗಿತ್ತು. ಈ ಕುರಿತು ಮಾತನಾಡಿದ ಸಿಎಂ, “ಇವು ಸರ್ಕಾರಿ ಜಾಗವಾಗಿದ್ದು, ಮುಂಚಿತವಾಗಿ ನೋಟಿಸ್ ನೀಡಲಾಗಿತ್ತು. ಆದರೂ ತೆರವು ಮಾಡದ ಕಾರಣ ಕ್ರಮ ಕೈಗೊಳ್ಳಬೇಕಾಯಿತು” ಎಂದು ತಿಳಿಸಿದರು.
ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ
ಕೋಗಿಲು ಪ್ರದೇಶದಲ್ಲಿ 2020–21ರಿಂದಲೇ ಅಕ್ರಮ ವಾಸ ನಡೆಯುತ್ತಿರುವುದು ಕಂದಾಯ ಮತ್ತು ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಸಿಎಂ ಕಿಡಿಕಾರಿದರು.
“ತಹಶೀಲ್ದಾರ್, ಶಿರಸ್ತೇದಾರ್ಗಳಿಗೆ ಗೊತ್ತಿಲ್ಲದೇ ಇಂತಹ ಒತ್ತುವರಿ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ಜಾಗ ಅಕ್ರಮವಾಗಿ ಒತ್ತುವರಿ ಆದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ” ಎಂದು ಸಿಎಂ ಕಠಿಣ ಎಚ್ಚರಿಕೆ ನೀಡಿದರು.
ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ
ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬೈಯ್ಯಪ್ಪನಹಳ್ಳಿಯ ಸರ್ವೇ ನಂ.23ರಲ್ಲಿ ಇರುವ 1,087 ಬಹುಮಹಡಿ ಮನೆಗಳನ್ನು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಪಾಲಿಕೆ ಅಧಿಕಾರಿಗಳಿಗೆ ಎರಡು ದಿನಗಳಲ್ಲಿ ಅರ್ಹರ ಪಟ್ಟಿ ಸಲ್ಲಿಸಲು ಸೂಚಿಸಲಾಗಿದೆ.
ಪ್ರತಿ ಮನೆಗೆ ಸುಮಾರು ₹11.20 ಲಕ್ಷ ವೆಚ್ಚವಾಗಿದ್ದು,
- ಸಾಮಾನ್ಯ ವರ್ಗದವರಿಗೆ ಎಲ್ಲಾ ಸಬ್ಸಿಡಿ ಸೇರಿ ₹8.70 ಲಕ್ಷ, ಉಳಿದ ₹2.5 ಲಕ್ಷ ಸಾಲ
- ಪರಿಶಿಷ್ಟ ಜಾತಿ/ವರ್ಗದವರಿಗೆ ₹9.50 ಲಕ್ಷ ಸಬ್ಸಿಡಿ, ಉಳಿದ ₹1.70 ಲಕ್ಷ ಸಾಲ ನೀಡಲಾಗುತ್ತದೆ.
ಇದಕ್ಕೆ ಜೊತೆಗೆ ಜಿಬಿಎ ಮೂಲಕ ಪ್ರತಿ ಮನೆಗೆ ₹5 ಲಕ್ಷ ಸಹಾಯಧನ ನೀಡಲು ಸೂಚಿಸಲಾಗಿದೆ.
ಜನವರಿ 1ರಂದು ಮನೆ ವಿತರಣೆ
ಅರ್ಹತೆ ಪರಿಶೀಲನೆ ನಾಳೆ-ನಾಡಿದ್ದು ಪೂರ್ಣಗೊಳ್ಳಲಿದ್ದು, ಜನವರಿ 1ರ ಹೊಸವರ್ಷದಂದೇ ಮನೆಗಳನ್ನು ಹಂಚಿಕೆ ಮಾಡಲಾಗುವುದು. ಈ ಜವಾಬ್ದಾರಿಯನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ವಹಿಸಲಾಗಿದೆ ಎಂದು ಸಿಎಂ ತಿಳಿಸಿದರು.
“ಇದು ಮಾನವೀಯತೆ ನೆಲೆಯಲ್ಲಿ ತೆಗೆದುಕೊಂಡ ವಿಶೇಷ ತೀರ್ಮಾನ. ಆದರೆ ಮುಂದಿನ ದಿನಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರಿಗೆ ಇಂತಹ ಸೌಲಭ್ಯ ದೊರೆಯುವುದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವನ್ನೂ ಸಹಿಸುವುದಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟ ಸಂದೇಶ ನೀಡಿದರು.
