ಕೋಲಾರ:
ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳಾದ ವೇಣುಗೋಪಾಲ್, ಮನೀಂದ್ರ ಕಾಲಿಗೆ ವೇಮಗಲ್ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ಫೈರಿಂಗ್ ಮಾಡಿದ್ದಾರೆ. ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಸಂತೋಷ್ಗೂ ಗಾಯವಾಗಿದೆ.
ಬಂಧಿಸಿ ಕರೆತರುವ ವೇಳೆ ಆರೋಪಿಗಳು ಪೊಲೀಸ್ ಸಿಬ್ಬಂದಿಯಾದ ಮಂಜುನಾಥ್ ಮತ್ತು ನಾಗೇಶ್ ಮೇಲೆ ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಇನ್ಸ್ಪೆಕ್ಟರ್ ವೆಂಕಟೇಶ್ ಫೈರಿಂಗ್ ಮಾಡಿದ್ದಾರೆ.
ಗಾಯಗೊಂಡ ಪೊಲೀಸ್ ಸಿಬ್ಬಂದಿ, ಆರೋಪಿಗಳಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಆರು ಆರೋಪಿಗಳ ಪೈಕಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಸಿಲಾಗಿದೆ. ಉಳಿದ ಮೂರು ಜನರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಗೃಹ ಸಚಿವ ಜಿ ಪರಮೇಶ್ವರ್ ಆಪ್ತನ ಹತ್ಯೆ
ಗೃಹ ಸಚಿವ ಜಿ ಪರಮೇಶ್ವರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತ ಎಂ ಶ್ರೀನಿವಾಸ್ ಎಂಬವರನ್ನು ಸೋಮವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಎಂ ಶ್ರೀನಿವಾಸ್ ಅವರು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡರಾಗಿದ್ದು, ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷರೂ ಆಗಿದ್ದರು. ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ಶ್ರೀನಿವಾಸ್ ಮೇಲೆ ಹಲ್ಲೆ ನಡೆದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು.
ಆರು ಜನ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿದ್ದರು. ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿದ್ದ ಬಾರ್ ಕಾಮಗಾರಿ ವೀಕ್ಷಣೆ ಹೋಗಿದ್ದಾಗ ಹಲ್ಲೆ ನಡೆದಿತ್ತು. ಅಪರಿಚಿತ ದುಷ್ಕರ್ಮಿಗಳು ಶ್ರೀನಿವಾಸ್ ಅವರ ಎದೆ, ತಲೆ, ದೇಹದ ಮೈಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಚೆ ಹಲ್ಲೆ ಮಾಡಿದ್ದರು. ಕೋಲಾರದ ಜಾಲಪ್ಪಾ ಆಸ್ಪತ್ರೆಯಲ್ಲಿ ಶ್ರೀನಿವಾಸ್ ಅವರು ಮೃತಪಟ್ಟಿದ್ದರು. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಜಮೀನು ವಿವಾದಕ್ಕೆ ಕೊಲೆ ಶಂಕೆ
ವೇಣುಗೋಪಾಲ್ ಹಾಗೂ ಕೊಲೆಯಾದ ಶ್ರೀನಿವಾಸ್ ನಡುವೆ ಜಮೀನು ವಿವಾದ ಹಾಗೂ ವೈಯಕ್ತಿಕ ದ್ವೇಷ ಇತ್ತು ಎಂದು ಹೇಳಲಾಗುತ್ತಿದೆ. ಶ್ರೀನಿವಾಸಪುರ ಹೊರವಲಯದ ಹೊಗಳಗೆರೆ ರಸ್ತೆಯಲ್ಲಿರುವ ಜಮೀನಿನಲ್ಲಿ ಶ್ರೀನಿವಾಸ್ ಬಾರ್ ಅಂಡ್ ರೆಸ್ಟೋರೆಂಟ್ ನಿರ್ಮಾಣಕ್ಕೆ ಮುಂದಾಗಿದ್ದರು. ಇದೇ ಅದೇ ಸ್ಥಳದಲ್ಲಿ ಶ್ರೀನಿವಾಸ್ ಅವರನ್ನು ಆರೋಪಿಗಳು ಕೊಲೆ ಮಾಡಿದ್ದಾರೆ.