ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ (KPCL)ದ ಒಟ್ಟು 622 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಡಿಸೆಂಬರ್ 27 ಮತ್ತು 28ರಂದು ನಡೆದ ಮರು ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬುಧವಾರ ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ನಡೆಸಲಾದ ಈ ಮರು ಪರೀಕ್ಷೆಯೊಂದಿಗೆ ನೇಮಕಾತಿ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಮೆರಿಟ್ ಪಟ್ಟಿಯನ್ನು ಶೀಘ್ರದಲ್ಲೇ ಕೆಪಿಸಿಎಲ್ಗೆ ಹಸ್ತಾಂತರಿಸಲಾಗುತ್ತದೆ. ನಂತರ ಕೆಪಿಸಿಎಲ್ ವತಿಯಿಂದ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ತಾತ್ಕಾಲಿಕ ಫಲಿತಾಂಶಕ್ಕೆ ಸಂಬಂಧಿಸಿದಂತೆ ಬಂದಿದ್ದ ಆಕ್ಷೇಪಣೆಗಳನ್ನು ತಜ್ಞರ ಸಮಿತಿ ಪರಿಶೀಲಿಸಿದ ನಂತರವೇ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರೀಕ್ಷೆ ನಡೆದ ಎಂಟು ದಿನಗಳೊಳಗೆ ತಾತ್ಕಾಲಿಕ ಫಲಿತಾಂಶ ಹಾಗೂ ಹತ್ತು ದಿನಗಳೊಳಗೆ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ, ಇದು ನ್ಯಾಯಾಲಯದ ನಿರ್ದೇಶನದಂತೆ ಸಮಯಬದ್ಧವಾಗಿ ಕೈಗೊಂಡ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಈಗ ಅಭ್ಯರ್ಥಿಗಳು ಕೆಪಿಸಿಎಲ್ನಿಂದ ಹೊರಬರುವ ಆಯ್ಕೆ ಪಟ್ಟಿ ಮತ್ತು ಮುಂದಿನ ನೇಮಕಾತಿ ಹಂತಗಳ ಕುರಿತು ಅಧಿಕೃತ ಪ್ರಕಟಣೆಗೆ ಕಾಯಬೇಕಾಗಿದೆ.
