ಬೆಂಗಳೂರು, ಮಾರ್ಚ್ 12 (ಕರ್ನಾಟಕ ವಾರ್ತೆ): ಕರ್ನಾಟಕ ಲೋಕಸೇವಾ ಆಯೋಗವು ಪ್ರಶ್ನೆಪತ್ರಿಕೆಗಳನ್ನು ತಯಾರಿಸುವಾಗ ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸಿ, ನಂತರ ಆಂಗ್ಲ ಭಾಷೆಗೆ ತರ್ಜುಮೆಗೊಳಿಸಲು ಸೂಚಿಸಲಾಗುವುದು. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅನುಕೂಲವಾಗುವುದು ಎಂದು ಮುಖ್ಯಮಂತ್ತಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಧಾನಸಭೆ ಕಲಾಪದಲ್ಲಿ ನಿಯಮ 69ರ ಮೇರೆಗೆ ವಿರೋಧ ಪಕ್ಷ ನಾಯಕರಾದ ಆರ್.ಅಶೋಕ, ಸದಸಸ್ಯರುಗಳಾದ ಅರಗ ಜ್ಞಾನೇಂದ್ರ, ಡಾ:ಅಶ್ವಥ್ ನಾರಾಯಣ ಸಿ.ಎನ್, ಬಸನಗೌಡ ಆರ್. ಪಾಟೀಲ್, (ಯತ್ನಾಳ್) , ಬಿ.ವೈ.ವಿಜಯೇಂದ್ರ, ಹೆಚ್.ಡಿ.ರೇವಣ್ಣ, ಸಿ.ಬಿ.ಸುರೇಶ್ ಬಾಬು, ದೊಡ್ಡನಗೌಡ ಹನುಮನಗೌಡ ಪಾಟೀಲ್ ಹಾಗೂ ಇತರರು ಸದನದ ವೇಳೆಯಲ್ಲಿ ಕೆ.ಎ.ಎಸ್ ಪರೀಕ್ಷೆ ಮತ್ತು ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಅನುವಾದದ ಲೋಪಗಳಿಂದ ಹಾಗೂ ಪರೀಕ್ಷೆ-ಸಂದರ್ಶನ ನಡೆದ ತರುವಾಯ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವ ಕೆ.ಪಿ.ಎಸ್.ಸಿ ಯ ವಿಳಂಬ ಧೋರಣೆಯಿಂದ ನಿರುದ್ಯೋಗ ಪದವೀಧರರು ಹಾಗೂ ಉದ್ಯೋಗಕಾಂಕ್ಷಿಗಳಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಚರ್ಚೆಗೆ ಮುಖ್ಯಮಂತ್ರಿಗಳು ಸರ್ಕಾರದ ಪರವಾಗಿ ಉತ್ತರ ನೀಡಿದರು.
ಕರ್ನಾಟಕ ಲೋಕಸೇವಾ ಆಯೋಗವು ಇತ್ತೀಚೆಗೆ ನಡೆಸಿದ್ದ 384 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ತಪ್ಪು ಭಾಷಾಂತರ ಆಗಿರುವುದು ಕಂಡು ಬಂದಿದ್ದರಿಂದ ಆಯೋಗವು ತಜ್ಞರ ಸಮಿತಿ ರಚಿಸಲಾಗಿತ್ತು. ತಜ್ಞರ ಸಮಿತಿಯು ಪರಿಶೀಲಿಸಿದ ವರದಿಯಂತೆ ಹತ್ತು ಪ್ರಶ್ನೆಗಳಿಗೆ ತಪ್ಪು ಭಾಷಾಂತರ ಆಗಿರುವುದರಿಂದ ಮರು ಪರೀಕ್ಷೆ ನಡೆಸಲಾಗಿದೆ. ಮರು ಪರೀಕ್ಷೆಯಲ್ಲಿಯೂ ಪ್ರಶ್ನೆಪತ್ರಿಕೆ ಭಾಷಾಂತರದಲ್ಲಿ ತಪ್ಪಾಗಿದೆ ಎಂದು ಕೆಲವು ಅಭ್ಯರ್ಥಿಗಳು ಗೊಂದಲ ಸೃಷ್ಟಿಸಿದ್ದರಿಂದ ಕರ್ನಾಟಕ ಲೋಕ ಸೇವಾ ಆಯೋಗವು ಮತ್ತೊಮ್ಮೆ ಸಮಿತಿ ರಚಿಸಿದ್ದು, ಸಮಿತಿಯು 6 ಪ್ರಶ್ನೆಗಳು ಭಾಷಾಂತರದಲ್ಲಿ ತಪ್ಪಾಗಿರುವುದರಿಂದ 6 ಕೃಪಾಂಕ ನೀಡಲು ತಜ್ಞರ ವರದಿಯಲ್ಲಿ ಸೂಚಿಸಿದೆ. ಅದರಂತೆ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆಗೆ ಅಭ್ಯರ್ಥಿಗಳು ಕೆ.ಎ.ಟಿಯಲ್ಲಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಕೆ.ಎ.ಟಿ ಯಿಂದ ಅಂತಿಮ ತೀರ್ಪು ಬಂದಿರುವುದಿಲ್ಲ ಎಂದರು.
ಕರ್ನಾಟಕ ಗ್ರಾಮೀಣ ಕುಡಿಯುವ ನೀರಿನ ನೈರ್ಮಲ್ಯ ಇಲಾಖೆಯಲ್ಲಿನ 25 ಸಹಾಯಕ ಕಾರ್ಯ ಪಾಲಕರ ಆಯ್ಕೆ ನಡೆದಿದ್ದು, ಆಯ್ಕೆ ಪಟ್ಟಿ ಪರಿಶೀಲಿಸಲು ಆನಂದ್ ಎಸ್ ಸಿದ್ದಾರೆಡ್ಡಿ ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ಆಯೋಗದ ತಜ್ಞರ ಸಮಿತಿಯು ಅಂತಿಮ ವರದಿ ನೀಡಿದ್ದು, ವರದಿಯಲ್ಲಿ 10 ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಶಿಫಾರಸ್ಸು ಮಾಡಲಾಗಿದೆ. ಕಳಂಕ ರಹಿತ 15 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಜಾರಿ ಮಾಡುವಂತೆ ಸದರಿ ಸಮಿತಿಯು ಶಿಫಾರಸ್ಸು ಮಾಡಿದೆ. ಸದರಿ ಸಮಿತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ಮಾಡಿಸಲು ಕ್ರಮ ವಹಿಸಲಾಗಿದೆ. ಇದನ್ನು ಆಯ್ಕೆಯಾದ ವಿಶ್ವಾಸ್ ಎಂಬ ಅಭ್ಯರ್ಥಿಯು ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದ್ದರಿಂದ ಈ ಎರಡು ಪ್ರಕರಣಗಳು ನ್ಯಾಯಾಲಯದ ಹಂತದಲ್ಲಿರುವುದರಿಂದ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂದರು.
ಕರ್ನಾಟಕ ಲೋಕಸೇವಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸರ್ಕಾರವು ಆದೇಶ ನೀಡಲು ಸಾಧ್ಯವಿಲ್ಲ. ವಿರೋಧಪಕ್ಷದವರ ಸಭೆ ಕರೆದು ಸಲಹೆ ಸೂಚನೆಗಳನ್ನು ಪಡೆದು ಆಯೋಗಕ್ಕೆ ಸೂಚನೆ ನೀಡಲಾಗುವುದರ ಜೊತೆಗೆ ಕೆಲವು ಸುಧಾರಣೆಗಳನ್ನು ತರಲು ಸೂಚಿಸಲಾಗುವುದು. ವಿರೋಧ ಪಕ್ಷದ ನಾಯಕರ ಪ್ರಸ್ತಾಪಿಸಿರುವಂತೆ ಲೋಕ ಸೇವಾ ಆಯೋಗದಲ್ಲಿರುವ 15 ಸದಸ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸುತ್ತದೆ. ಇನ್ನುಮುಂದೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗ ಭಾಷಾಂತರದಲ್ಲಿ ಲೋಪವಾದಲ್ಲಿ, ಭಾಷಾಂತರ ಮಾಡಿದವರನ್ನು ಕಪ್ಪುಪಟ್ಟಿಗೆ ಸೇರಿಸಿ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲು ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಕರ್ನಾಟಕ ಲೋಕ ಸೇವಾ ಆಯೋಗವು ಸುಧಾರಣೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ವಿರೋಧಪಕ್ಷದ ನಾಯಕರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದು ಅವರ ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಎಂದರು.
ಆಯೋಗವು ಸಿವಿಲ್ ಅಧಿಕಾರಿಗಳನ್ನು ಆಯ್ಕೆ ಮಾಡುವುದರಿಂದ ಪಾರದರ್ಶವಾಗಿ, ಭ್ರಷ್ಟಚಾರ ಮುಕ್ತವಾಗಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆಯೋಗದ ಸುಧಾರಣೆಗೆ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸದನದಲ್ಲಿ ಉತ್ತರಿಸಿದರು.