ಮೈಸೂರು: ಕೆಎಸ್ಐಸಿ ಫಿಲೇಚರ್ ಕಾರ್ಖಾನೆ ಜಮೀನಿನ ಸುತ್ತಲಿನ ವಿವಾದ ತೀವ್ರಗೊಳ್ಳುತ್ತಿದೆ, ಸ್ಥಳೀಯ ಕಾರ್ಮಿಕರ ಸಮಸ್ಯೆಯಾಗಿ ಪ್ರಾರಂಭವಾದ ವಿಷಯವನ್ನೀಗ ರಾಜಕೀಯವಾಗಿ ದೊಡ್ಡ ವಿವಾದವಾಗಿ ಪರಿವರ್ತಿಸಲಾಗಿದೆ.
ಟಿ ನರಸೀಪುರದಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್ಐಸಿ) ಫಿಲೇಚರ್ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣವನ್ನು ನಿರ್ಮಿಸುವ ಪ್ರಸ್ತಾಪವು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಈ ಸಮಸ್ಯೆ ಉಲ್ಬಣಗೊಂಡು ಉಂಟಾಗುತ್ತಿರುವ ಗದ್ದಲದ ನಡುವೆ, ಮಹತ್ವದ ರಾಜಕೀಯ ಬೆಳವಣಿಗೆ ಬೆಳಕಿಗೆ ಬಂದಿದೆ.
ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನಾ ಸ್ಥಳದಲ್ಲಿ ಒಟ್ಟಾಗಿ ಕಾಣಿಸಿಕೊಂಡರು, ಪ್ರತಿಭಟನಾ ನಿರತ ಕೆಎಸ್ಐಸಿ ನೌಕರರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ಮೈಸೂರು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯ ಸೂಚನೆ ನೀಡಿದೆ.
ಕಳೆದ ಸಂಸತ್ ಚುನಾವಣೆಯಲ್ಲಿ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಯದುವೀರ್ ಒಡೆಯರ್ ನಡುವೆ ಶೀತಲ ಸಮರ ಏರ್ಪಟ್ಟಿತ್ತು. ಆದರೆ ಈಗ ಇಬ್ಬರು ರಾಜಕಾರಣಿಗಳು ಒಗ್ಗಟ್ಟಾಗಿರುವುದು ಪ್ರಬಲವಾದ ರಾಜಕೀಯ ಸಂಕೇತಗಳನ್ನು ಕಳುಹಿಸಿದೆ. ರಾಜಕೀಯ ನಾಯಕರು ಇದನ್ನು ಕಾರ್ಮಿಕರೊಂದಿಗಿನ ಒಗ್ಗಟ್ಟಿಗಿಂತ ಹೆಚ್ಚಿನದಾಗಿ ನೋಡುತ್ತಾರೆ.
ಈ ಇಬ್ಬರು ಯುವ ನಾಯಕರ ಒಗ್ಗಟ್ಟು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಪ್ರಬಲ ಸಂದೇಶವೆಂದು ವ್ಯಾಖ್ಯಾನಿಸಲಾಗಿದೆ. ಇಬ್ಬರು ಜೊತೆಯಾಗಿ ಭಾಗವಹಿಸಿರುವುದು ವಿಶೇಷವಾಗಿ ಸ್ಥಳೀಯ ಬಿಜೆಪಿ ನಾಯಕರಲ್ಲಿ ಸಂತಸ ಮೂಡಿಸಿದ್ದು, ರಾಜಕೀಯ ತೂಕವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಯತ್ನಿಸುತ್ತಿರುವ ಪ್ರತಾಪ್ ಸಿಂಹ, ಯದುವೀರ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇದು ಪಕ್ಷದೊಳಗೆ ಬೆಂಬಲವನ್ನು ಕ್ರೋಢೀಕರಿಸುತ್ತದೆ ಮತ್ತು ಒಗ್ಗಟ್ಟನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ.
