ಬೆಂಗಳೂರು:
“ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಕೇಳಿ ತಿಳಿದುಕೊಳ್ಳಲಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳಿಗೂ ಏನು ಸಂಬಂಧ? ಅವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಏನು ಗೊತ್ತಿದೆ” ಎಂದೂ ಪ್ರಶ್ನಿಸಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳು ಭಾನುವಾರ, ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುತ್ತಿಲ್ಲ ಎಂಬ ಕುಮಾರಸ್ವಾಮಿ ಆರೋಪ ಬಗ್ಗೆ ಕೇಳಿದಾಗ ಅವರು ತಿರುಗೇಟು ನೀಡಿದ್ದು: “ಕುಮಾರಸ್ವಾಮಿ ಅವರಿಗೆ ಬಡ ಜನತೆಯ ನೋವು ಗೊತ್ತಿದ್ದರೆ ಮಾತನಾಡುತ್ತಿರಲಿಲ್ಲ. ಅವರೂ ಒಬ್ಬ ನಾಯಕರು, ಆರೋಪ ಮಾಡಲಿ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಒಳ್ಳೆಯದಾಗಬೇಕಿತ್ತೊ ಅವರಿಗೆ ಅದು ತಲುಪಿ, ಸಂತೋಷವಾಗಿದ್ದಾರೆ.”
Also Read: HD Kumaraswamy Criticizes Siddaramaiah: Accuses Him of Being a Duplicate Chief Minister
“ಕುಮಾರಸ್ವಾಮಿ ಅವರೇನು ಫಲಾನುಭವಿಗಳೂ ಅಲ್ಲ, ಅದರ ಬಗ್ಗೆ ಅವರಿಗೆ ಚಿಂತೆನೆಯೇ ಇಲ್ಲ. ಪಾಪ ಅವರಿಗೆ ಅವರು ಪಂಚರತ್ನ ಯೋಜನೆಗಳನ್ನು ಜಾರಿ ಮಾಡಲು ಅವಕಾಶ ಆಗಲೇ ಇಲ್ಲ. ನಮ್ಮ ಗ್ಯಾರಂಟಿ ಯೋಜನೆಗಳು ತಲುಪಿದೆಯೋ, ಇಲ್ಲವೊ ಎನ್ನುವುದನ್ನು ಅವರು ಮತದಾರರಿಗೆ ಕೇಳಿ ತಿಳಿದುಕೊಳ್ಳಬೇಕು…
“ಚನ್ನಪಟ್ಟಣದ 25 ಕ್ಕೂ ಹೆಚ್ಚು ಮತದಾರರ ಬಳಿ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರದ ಮತದಾರರ ಬಳಿ ಹೋಗಿ ಕೇಳಲಿ. ಉಚಿತ ವಿದ್ಯುತ್, ಶಕ್ತಿ, ಅನ್ನ ಭಾಗ್ಯ, ಗೃಹಲಕ್ಷ್ಮೀ ಯೋಜನೆಗಳು ಅವರಿಗೆ ತಲುಪಿದೆಯೆ? ಇಲ್ಲವೇ? ಎಂದು ಪರೀಕ್ಷೆ ಮಾಡಲಿ. ಒಂದಷ್ಟು ತಾಂತ್ರಿಕ ದೋಷ ಹಾಗೂ ಇತರೇ ಕಾರಣಗಳಿಂದ ಶೇ 5 ರಷ್ಟು ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಈಗ ಒಂದೊಂದೇ ಸಮಸ್ಯೆಗಳನ್ನು ಬಗೆಹರಿಸಿ ತಲುಪಿಸಲಾಗುತ್ತಿದೆ…
ಕರ್ನಾಟಕದ ಸಚಿವರಿಗೆ ಪಂಚರಾಜ್ಯ ಚುನಾವಣೆ ಸಲುವಾಗಿ ಕಮಿಷನ್ ಟಾರ್ಗೆಟ್ ಕೊಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, “ಕುಮಾರಸ್ವಾಮಿ ಅವರು ಟಾರ್ಗೆಟ್ ಕೊಟ್ಟಿರಬೇಕು. ನಮ್ಮ ಸಚಿವರು ತೆಲಂಗಾಣ ಚುನಾವಣಾ ಪ್ರಚಾರಕ್ಕೆ ಹೋಗಿ ಬರುತ್ತಿದ್ದಾರೆ. ತಾಳ್ಮೆಯಿಂದ ಇರಲು ಕುಮಾರಸ್ವಾಮಿ ಅವರಿಗೆ ಆಗುತ್ತಿಲ್ಲ. ಅವರಿಗೂ ವಿಜಯೇಂದ್ರ ಇಬ್ಬರಿಗೂ ಒಳ್ಳೆಯದಾಗಲಿ” ಎಂದರು.
ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಕೊಟ್ಟಿರುವ ನೋಟಿಸ್ ಪೀರಿಯಡ್‌ನಲ್ಲಿ ಇದ್ದಾರೆಯೇ ಎಂದು ಕೇಳಿದಾಗ “ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿದ್ದಾರೆ. ನಾವೆಲ್ಲ ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಬೇರೆ ಚರ್ಚೆಯೇ ಇಲ್ಲ” ಎಂದರು.