- ಬರ, ವಿದ್ಯುತ್ ಕ್ಷಾಮದಿಂದ ಬಳಲಿರುವ ರೈತರಿಗೆ ಸಾಂತ್ವನ ಹೇಳಲಿರುವ ಮಾಜಿ ಮುಖ್ಯಮಂತ್ರಿ
- ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರ ಜತೆ HDK ರಾಜ್ಯ ಪರ್ಯಟನೆ
ಬೆಂಗಳೂರು:
ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದಿಲ್ಲಿ ಘೋಷಣೆ ಮಾಡಿದರು.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬರ ಅಧ್ಯಯನಕ್ಕಾಗಿ ಪಕ್ಷದ ಜಿಲ್ಲಾ ಮಟ್ಟದ ತಂಡಗಳನ್ನು ರಚನೆ ಮಾಡುವ ಸಂಬಂಧ ಕರೆಯಲಾಗಿದ್ದ ಮಹತ್ವದ ಸಭೆಯ ನಂತರ ಅವರು ಮಾಧ್ಯಮಗಳ ಜತೆ ಮಾತನಾಡುತ್ತಾ ಈ ವಿಷಯ ಪ್ರಕಟಿಸಿದರು.
ಮುಂಬರುವ ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ನಮ್ಮ ಪಕ್ಷದ ಎಲ್ಲಾ ಶಾಸಕರು, ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. ಅವರ ನೋವಿಗೆ ದನಿ ಆಗುತ್ತೇನೆ. ಅವರ ಹಕ್ಕುಗಳಿಗಾಗಿ ಸರಕಾರದ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ರಾಜ್ಯದಲ್ಲಿ ಈ ವರ್ಷ ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಟ್ಟಿದ್ದಾರೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ತೀವ್ರ ಬರಗಾಲ ನೋಡಿರಲಿಲ್ಲ ಅಂತ ಸರಕಾರವೇ ಹೇಳಿದೆ. ಮಳೆ ಅಭಾವದಿಂದ 65 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶ ಆಗಿದೆ ಅಂತ ಕೇಂದ್ರ ಸರಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ, ರೈತರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋತಿದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡುತ್ತಿರುವ ಸರಕಾರ:
ರಾಜ್ಯ ಕಾಂಗ್ರೆಸ್ ಸರಕಾರವು ಕಳೆದ ಐದು ತಿಂಗಳಿನಿಂದ ವೈಫಲ್ಯಗಳ ಕೂಪದಲ್ಲಿ ಸಿಲುಕಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲದಕ್ಕೂ ಕೇಂದ್ರದ ಕಡೆಗೇ ಬೊಟ್ಟು ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಇದು ಸರಿಯಲ್ಲ. ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡುವ ಬದಲು ಕೇಂದ್ರದ ಬಳಿ ಹೋಗಿ ಪರಿಹಾರ ಕೇಳಬಹುದಿತ್ತಲ್ಲವೇ ಎಂದು ಸಿಎಂ ಹೇಳಿದ್ದಾರೆ. ಸಿಎಂ ಆದವರು ಹೇಳುವ ಮಾತೇ ಇದು? ಎಂದು ಅವರು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಾರೆ. ವಿದ್ಯುತ್ ಕೊರತೆ ಆದಾಗ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಅಂತಾರೆ. ಎಲ್ಲದಕ್ಕೂ ಕೇಂದ್ರದ ಕಡೆಗೇ ಕೈ ತೋರಿಸುತ್ತಾರೆ. ಹಾಗಾದರೆ, ರಾಜ್ಯ ಸರಕಾರ ಎನ್ನುವುದು ಏತಕ್ಕೆ? ಇಲ್ಲಿ ಕೂತು ಇವರು ಏನು ಮಾಡುತ್ತಿದ್ದಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆಗೆ ಚಾಟಿ:
ಕಲಬುರಗಿ ನಾಯಕರೊಬ್ಬರು ಮೈಸೂರಿನಲ್ಲಿ ಏನೇನನ್ನೋ ಹೇಳಿದ್ದಾರೆ. ಬಿಜೆಪಿಗೆ ನಾಯಕರು ಜಾಬ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂದಿದ್ದಾರೆ. ಅದೇನು ಎನ್ನುವುದನ್ನು ನಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೋರಿಸುತ್ತೇವೆ. ಆದರೆ, ಅವರು ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯ ಜನರಿಗೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಆ ಜಿಲ್ಲೆಯಲ್ಲಿನ ತೊಗರಿ ಬೆಳೆಗಾರರ ಸಂಕಷ್ಟ ಗೊತ್ತಿದೆಯಾ ಅವರಿಗೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಾಜಿ ಮುಖ್ಯಮಂತ್ರಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷಗಳು ಟೀಕೆ ಮಾತಾಡಿದ ತಕ್ಷಣ ಅವರಿಗೆ ಏನೂ ಕೆಲಸ ಇಲ್ಲ ಎಂದು ಸರಕಾರ ಅಹಂಕಾರದಿಂದ ಹೇಳುತ್ತದೆ. ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಇಲ್ಲದಿದ್ದರೆ, ಜನರ ಮುಂದೆ ನಿಮ್ಮ ಗೌರವವೇ ಕಡಿಮೆ ಆಗುತ್ತದೆ ಎಂಡು ಅವರು ಎಚ್ಚರಿಕೆ ಕೊಟ್ಟರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಬಂಡೆಪಪ್ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಆಲ್ಕೊಡ್ ಹನುಮಂತಪ್ಪ, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ನೇಮಿರಾಜ್ ನಾಯಕ್, ಮಾಜಿ ಶಾಸಕ ಆರ್.ಮಂಜಿನಾಥ್, ರಾಜಾ ವೆಂಕಟಪ್ಪ ನಾಯಕ್, ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.