ಬೆಂಗಳೂರು:
214 ತಾಲೂಕುಗಳಲ್ಲಿ ಬರ ಇದೆ ಅಂತ ಸರಕಾರವೇ ಕೇಂದ್ರಕ್ಕೆ ವರದಿ ಕೊಟ್ಟಿದೆ. ಮುಖ್ಯಮಂತ್ರಿಗಳು ಎಲ್ಲೋ ಹೋಗಿ ಡಾನ್ಸ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಎಸ್ ಡಿ ಆರ್ ಎಫ್ ನಲ್ಲಿ 529 ಕೋಟಿ ರೂ. ಹಣ ಇಟ್ಟಿದ್ದೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ ಸಚಿವರು. ಎಲ್ಲಾ ಕಡೆ ಬರ ಪರಿಸ್ಥಿತಿ ಇದೆ ಎಂದು ಮಾದ್ಯಮಗಳಲ್ಲಿ ನಿತ್ಯವೂ ವರದಿಗಳು ಬರುತ್ತಿವೆ. ಮುಖ್ಯಮಂತ್ರಿಗಳು ಎಲ್ಲೋ ಹೋಗಿ ಡಾನ್ಸ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಜನರು ಕಷ್ಟದಲ್ಲಿದ್ದರೆ ಇವರಿಗೆ ಸಂಭ್ರಮವೋ ಸಂಭ್ರಮ! ಸಂಭ್ರಮ ಮಾಡಿಕೊಂಡು ಜನರನ್ನು ಅಣಕ ಮಾಡುತ್ತಿದ್ದಾರೆ. ಅಲ್ಲಿ ರೈತರ ಕಷ್ಟಕ್ಕೆ ಏನಾದರೂ ಪರಿಹಾರ ಕೊಟ್ಟು ಬಂದರಾ ಇವರು ಎಂದು ಕುಮಾರಸ್ವಾಮಿ ಅವರು ಹೇಳಿದರು.
2018 ಚುನಾವಣೆಗೆ ಮುನ್ನ ರೈತರಿಗೆ ಹತ್ತು ಸಾವಿರ ಕೊಡುತ್ತೇವೆ ಎಂದು ರೈತರಿಗೆ ಭರವಸೆ ಕೊಟ್ಟಿದ್ದರು ಕಾಂಗ್ರೆಸಿನವರು. ಆದರೆ ಸರಕಾರ ಖಜಾನೆಯಲ್ಲಿ ಹಣ ಇಟ್ಟಿರಲಿಲ್ಲ ಇವರು. ನಂತರ ನಾನು ಮುಖ್ಯಮಂತ್ರಿ ಆದಾಗ ಅದನ್ನು ಕೊಡಲು ಆಗಲಿಲ್ಲ ಎಂದ ಅವರು; ಬಿಜೆಪಿ ಸರಕಾರದಲ್ಲಿ ಕೊಡಲಾಗುತ್ತಿದ್ದ ʼಕಿಸಾನ್ ಸಮ್ಮಾನ್ʼ ಯೋಜನೆಯನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿತು. ಗ್ಯಾರಂಟಿ ಎಂದು ಹೇಳಿಕೊಂಡು ಜನರಿಗೆ ಟೋಪಿ ಹಾಕಿದರು ಎಂದು ಅವರು ಕಿಡಿಕಾರಿದರು.