Home ಮೈಸೂರು Bidadi Township | ಬಿಡದಿ ಟೌನ್ ಶಿಪ್ ಮಾಡಲು ಹೊರಟಿದ್ದೇ ಕುಮಾರಸ್ವಾಮಿ, ಈಗ ಅವರ ಕುಟುಂಬದವರೇ...

Bidadi Township | ಬಿಡದಿ ಟೌನ್ ಶಿಪ್ ಮಾಡಲು ಹೊರಟಿದ್ದೇ ಕುಮಾರಸ್ವಾಮಿ, ಈಗ ಅವರ ಕುಟುಂಬದವರೇ ವಿರೋಧ ಮಾಡೋದು ಯಾವ ನ್ಯಾಯ: ಡಿಸಿಎಂ ಡಿ ಕೆ ಶಿವಕುಮಾರ್ ಪ್ರಶ್ನೆ

7
0
Kumaraswamy was going to make Bidadi township, now what is the justice that his family is opposing it: DCM DK Shivakumar questions

ನಾನು ಡಿನೋಟಿಫಿಕೇಶನ್ ಮಾಡಲ್ಲ, ದುಡ್ಡು ಹೊಡೆದ ಆರೋಪ ಹೊತ್ತುಕೊಳ್ಳಲ್ಲ

ಬೆಂಗಳೂರು/ಮೈಸೂರು/ ಮಂಡ್ಯ, ಏ.25: “ಬಿಡದಿ ಸೇರಿದಂತೆ ಏಳು ಕಡೆ ಟೌನ್ ಶಿಪ್ ಮಾಡಲು ಹೊರಟಿದ್ದವರು ಹಾಗೂ ಈ ಯೋಜನೆಯ ಪಿತಾಮಹರೇ ಕುಮಾರಸ್ವಾಮಿ. ಈಗ ಅವರ ಕುಟುಂಬದವರೇ ವಿರೋಧ ಮಾಡಿದರೆ ಯಾವ ನ್ಯಾಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.

ಮೈಸೂರಿನಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಬಿಡದಿ ಟೌನ್ ಶಿಪ್ ಗೆ ದೇವೇಗೌಡರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, “ದೇವೇಗೌಡರು ದೊಡ್ಡವರು. ಪಾಪ ಅವರು ಮರೆತಿರಬೇಕು. ಬಿಡದಿ, ಸಾತನೂರು, ನಂದಗುಡಿ ಈ ಭಾಗದಲ್ಲಿ ಟೌನ್ ಶಿಪ್ ಗೆ ನೋಟಿಫಿಕೇಶನ್ ಹೊರಡಿಸಿದ್ದು ಅವರ ಸುಪುತ್ರ ಕುಮಾರಸ್ವಾಮಿ. ಅವರೇ ಈ ತೀರ್ಮಾನ ಮಾಡಿ ಡಿಎಲ್ ಎಫ್ ಅವರಿಂದ 300 ಕೋಟಿ ರೂ. ಹಣ ಕಟ್ಟಿಸಿಕೊಂಡಿದ್ದರು. ಆನಂತರ ಬಿಜೆಪಿ ಸರ್ಕಾರ ಬಂದಾಗ ಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹಣ ವಾಪಸ್ ನೀಡಿದ್ದರು” ಎಂದು ನೆನಪಿಸಿದರು.

“ನಾನು ಈಗ ಯಾವುದೇ ಜಮೀನು ಡಿನೋಟಿಫಿಕೇಷನ್ ಮಾಡಲು ತಯಾರಿಲ್ಲ. ಇದು ಮಾಡಿದ ತಕ್ಷಣ ದುಡ್ಡು-ಕಾಸು ಹೊಡೆದರು ಎನ್ನುವ ಆರೋಪ ಬರುತ್ತದೆ. ಈಗಾಗಲೇ ನಾನು ಕೋರ್ಟ್, ಕಚೇರಿ ಅಲೆದು, ಜೈಲು ವಾಸವನ್ನೂ ಅನುಭವಿಸಿದ್ದೇನೆ. ನನ್ನ ಸ್ವಂತ ಜಮೀನಿನ ಬಗ್ಗೆಯೂ ಇವರುಗಳೇ ಆರೋಪ ಮಾಡಿದ್ದಾರೆ. ದೇವೇಗೌಡರೇ ನಿಮ್ಮ ಮಗ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾಗ ಅವರೇ ಯಾಕೆ ಈ ಜಮೀನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗೇಕೆ ಮಾತನಾಡುತ್ತಿದ್ದೀರಿ? ನಾನು ಎಲ್ಲಾ ರೈತರ ಬಳಿ ಮಾತನಾಡಿದ್ದೇನೆ. ಗ್ರೇಟರ್ ಬೆಂಗಳೂರು ನಗರ ಇಡೀ ದೇಶಕ್ಕೇ ಮಾದರಿಯಾಗುವಂತಹ ನಗರವನ್ನಾಗಿ ಮಾಡುತ್ತೇವೆ. ದೆಹಲಿ‌, ಚಂಡೀಗಡ್ ಮಾದರಿಗಿಂತ ಉತ್ತಮವಾಗಿ 10 ಸಾವಿರ ಎಕರೆಯಲ್ಲಿ ಬೆಂಗಳೂರು ನಗರಕ್ಕಿಂತ ಚೆನ್ನಾಗಿ ರೂಪಿಸಲಾಗುವುದು. ಇದಕ್ಕಾಗಿ ಯೋಜನೆ ಸಿದ್ಧಾವಾಗುತ್ತಿದೆ” ಎಂದರು.

“ಇಲ್ಲಿ ರೈತರು ತಮ್ಮ ಭೂಮಿ ಮಾರಲೂ ಆಗದೆ, ಅಭಿವೃದ್ಧಿಯನ್ನು ಮಾಡಲಾಗದೇ ಪರದಾಡುತ್ತಿದ್ದಾರೆ. ಏನಾದರೂ ಒಂದು ತೀರ್ಮಾನ ಮಾಡಿ ಎಂದು ರೈತರೇ ನನ್ನ ಬಳಿ ಬಂದು ಮನವಿ ಮಾಡಿದ್ದಾರೆ. ಅವರು ತಮ್ಮ ಆಸ್ತಿ ಕಳೆದುಹೋಯಿತು ಎನ್ನಬಾರದು, ಜತೆಗೆ ಖುಷಿ ಪಡಬೇಕು. ಭೂಮಿ ಹೋದರೂ ಉತ್ತಮ ಉತ್ತಮ ಪರಿಹಾರ‌ ನೀಡಿದ್ದಾರೆ ಎನ್ನಬೇಕು. ರೈತರ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದು ಭೂಮಿಗೆ ಹಣದ ಪರಿಹಾರ ಅಥವಾ ಅಭಿವೃದ್ಧಿ ಪಡಿಸಿದ ಪರಿವರ್ತಿತ ಭೂಮಿ ಪಡೆಯಬಹುದು ಎಂದು ತಿಳಿಸಿದ್ದೇವೆ. ರಾಜಕೀಯವಾಗಿ ನಾವು ಏನೇ ಮಾಡಿದರೂ ವಿರೋಧ ಮಾಡುತ್ತಾರೆ” ಎಂದು ಹೇಳಿದರು.

ಜಿಲ್ಲೆ ಮರುನಾಮಕರಣ ಹೇಗೆ ಮಾಡಬೇಕು ಎಂಬುದು ಗೊತ್ತಿದೆ ರಾಮನಗರ ಹೆಸರು ಬದಲಾವಣೆ ‌ಸಮಯದಲ್ಲಿಯೂ ಸಹಕಾರ ಸಿಗಲಿಲ್ಲ. ಈಗ ದೊರೆಯುತ್ತದೆಯೇ ಎಂದಾಗ, “ನನಗೆ ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾಡಿಯೇ ಸಿದ್ದ. ಇದು ಬೆಂಗಳೂರು ದಕ್ಷಿಣವೇ. ನಾವು ಯಾರೂ ಸಹ ಹೊರಗಡೆಯಿಂದ ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ‌ ಹಕ್ಕು. ನಮ್ಮ ತಂದೆ ತಾಯಿ, ಹುಟ್ಟು ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ?” ಎಂದರು.

ಶಿವಕುಮಾರ್ ಕಂಡರೆ ಅವರಿಗೆ ಅಸೂಯೆಯೇ ಎಂದು ಕೇಳಿದಾಗ, “ಏನಾದರೂ ಅಂದುಕೊಳ್ಳಲಿ, ನನ್ನ ಕಂಡರೆ ಅವರಿಗೆ ಪ್ರೀತಿ ಜಾಸ್ತಿ. ದೇವೇಗೌಡರ ಬಳಿ ನಮ್ರತೆಯಿಂದ ಬೇಡಿಕೊಳ್ಳುತ್ತೇನೆ. ಬಿಡದಿ ಟೌನ್ ಶಿಪ್ ನಿಮ್ಮ ಮಗನೇ ಮಾಡಿದ್ದು, ನಿಮ್ಮ ಕಾಲದಲ್ಲಿಯೇ ಆಗಿದ್ದು. ನಾವು ನೀವು ಹಾಕಿದ್ದನ್ನು ಮುಂದುವರೆಸುತ್ತಿದ್ದೇವೆ” ಎಂದು ತಿಳಿಸಿದರು.

ಈ ಬಾರಿ ವಿನೂತನ ದಸರಾ; ಕಂಬಳ ಸೇರ್ಪಡೆ “ನಾಡ ಹಬ್ಬ ದಸರಾವನ್ನು ಸಹ ವಿನೂತನವಾಗಿ ಆಚರಿಸಲು ಚರ್ಚೆ ನಡೆಸಲಾಗಿದೆ. ಹಳೆಯ ಒಂದಷ್ಟು ಪದ್ದತಿಗಳನ್ನು ಕೈಬಿಟ್ಟು ಹೊಸ ಪೀಳಿಗೆಯನ್ನು ಸೆಳೆಯುವಂತೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಸಭೆ ನಡೆಸೋಣ ಎಂದು ಹೇಳಿದ್ದಾರೆ. ಕಂಬಳ ನಮ್ಮ ರಾಜ್ಯದ ಕರಾವಳಿ ಭಾಗ ವಿಶೇಷವಾದ ಆಚರಣೆ, ಹೀಗಾಗಿ ಕಂಬಳವನ್ನು ದಸರಾದಲ್ಲಿ ಸೇರಿಸಲಾಗುವುದು. ಇದಕ್ಕೆ ಸ್ಥಳ ಹುಡುಕಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದರು.

ಈ ಪರಿಸ್ಥಿತಿಯಲ್ಲಿ ಟೀಕೆ ಮಾಡಲ್ಲ ಕಾಶ್ಮೀರದಲ್ಲಿ ಭದ್ರತಾ ವೈಫಲ್ಯವಾಗಿದೆ ಎಂದು ಕೇಂದ್ರ ಒಪ್ಪಿಕೊಂಡಿರುವ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಈ ಸಂದರ್ಭದಲ್ಲಿ ಯಾರನ್ನೂ ಟೀಕೆ ಮಾಡುವುದಿಲ್ಲ. ಇದು ಕೆಸರು ಎರಚುವಂತಹ ಸಂದರ್ಭವಲ್ಲ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ಆದರೆ ನಾನು ಒಂದು ಜವಾಬ್ದಾರಿಯುತ ಪಕ್ಷದ ಅಧ್ಯಕ್ಷನಾಗಿ ವಿರುದ್ಧ ಮಾತನಾಡಲು ಇಷ್ಟವಿಲ್ಲ. ಏನೇ ಮಾತನಾಡಿದರು ಅದು ಆಹಾರವಾಗುತ್ತದೆ. ಇದು ನನಗೆ ಇಷ್ಟವಿಲ್ಲ. ಜನರಿಗೆ ಮೊದಲು ಶಾಂತಿ, ನೆಮ್ಮದಿ ಮುಖ್ಯ. ದುಷ್ಕರ್ಮಿಗಳನ್ನು ಮುಗಿಸುತ್ತೇವೆ ಎಂದು ಕೇಂದ್ರ ಸರ್ಕಾರ ಸಂಕಲ್ಪ ಮಾಡಿದೆ. ನಾವು ಮಾಡಿ ಎಂದು ಹೇಳಿದ್ದೇವೆ. ಮಿಕ್ಕಿದ್ದು ಅವರಿಗೆ ಬಿಟ್ಟಿದ್ದು” ಎಂದರು.

LEAVE A REPLY

Please enter your comment!
Please enter your name here